ಮಂಗಳೂರು: ಎಫ್ ಬಿ ಮೂಲಕ ಪರಿಚಯವಾದ ಸ್ನೇಹಿತನಿಂದ ವಜ್ರದ ಹಾಗೂ ಚಿನ್ನದ ಉಡುಗೊರೆ ಬರುತ್ತದೆಂದು ನಂಬಿ, ಮಂಗಳೂರಿನ ವ್ಯಕ್ತಿಯೋರ್ವರು 1.35 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಫೇಸ್ಬುಕ್ನಲ್ಲಿ ರೇನಾಲ್ಟ್ ಫ್ರೀನ್ಸ್ ಕ್ರಿಸ್ಟೋಫರ್ ಎಂಬ ವ್ಯಕ್ತಿ ಪರಿಚಯವಾಗಿದ್ದರು. ಇವರಿಬ್ಬರ ನಡುವೆ ನಿರಂತರ ಸಂದೇಶ ವಿನಿಮಯವಾಗುತ್ತಿತ್ತು. ಈ ಸಂದರ್ಭ ರೇನಾಲ್ಟ್ ಫ್ರೀನ್ಸ್ ಕ್ರಿಸ್ಟೋಫರ್ ಅವರು 35 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಡೈಮಂಡ್ ಉಡುಗೊರೆ ಕಳುಹಿಸುವುದಾಗಿ ಮಂಗಳೂರಿನ ವ್ಯಕ್ತಿಗೆ ತಿಳಿಸಿದ್ದರು.
ಬಳಿಕ ಜ.18ರಂದು ಮಂಗಳೂರಿನ ವ್ಯಕ್ತಿಗೆ 8754231656 ದೂರವಾಣಿ ಸಂಖ್ಯೆಯಿಂದ ದಿಲ್ಲಿ ಕಸ್ಟಮ್ ಆಫೀಸರ್ ಎಂದು ಪರಿಚಯಿಸಿ ಕರೆ ಮಾಡಿದ ಮಹಿಳೆಯೋರ್ವರು ತಮಗೆ ದಿಲ್ಲಿ ಏರ್ಪೋರ್ಟ್ನಿಂದ ಒಂದು ಪಾರ್ಸೆಲ್ ಬಂದಿದೆ. ಅದರ ಡೆಲಿವರಿ ಚಾರ್ಜ್ 30 ಸಾವಿರ ರೂ. ನೀಡಬೇಕೆಂದು ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ಜ.20ರಂದು ಮತ್ತೆ ಕರೆ ಮಾಡಿ, ವಿವಿಧ ಕಾರಣಗಳನ್ನು ತಿಳಿಸಿ 1,05,000 ರೂ. ನಗದು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗೆ ಒಟ್ಟು 1.35 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಆದರೆ ಯಾವುದೇ ಉಡುಗೊರೆ ತಲುಪದಿರುವುದರಿಂದ ಹಣ ಕಳೆದುಕೊಂಡ ವ್ಯಕ್ತಿಗೆ, ತಾನು ವಂಚನೆಗೊಳಗಾಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಮಂಗಳೂರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
28/01/2021 11:57 am