ಬಂಟ್ವಾಳ: ನಿನ್ನೆ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಗಣೇಶ ಎಂಬಾತ ಮಂಗಳೂರಲ್ಲಿ ಪತ್ತೆಯಾಗಿದ್ದಾನೆ. ಮಂಗಳೂರಿನಲ್ಲಿ ಗಣೇಶ್ ಪತ್ತೆಯಾಗಿದ್ದು ಬಳಿಕ ಆತನನ್ನು ವಿಟ್ಲ ಠಾಣೆಗೆ ಕರೆದೊಯ್ಯುದು ಬಾಲಕನಿಗೆ ಬುದ್ಧಿವಾದ ಹೇಳಿ ಪೋಷಕರಿಗೆ ಹಸ್ತಾಂತರಿಸಲಾಗಿದೆ. ವಿಟ್ಲ ಪೋಲೀಸರು ಸುರಕ್ಷಿತವಾಗಿ ಬಾಲಕನನ್ನು ಪೋಷಕರಿಗೆ ಒಪ್ಪಿಸಿರುತ್ತಾರೆ.
ಈತ ಕರೋಪ್ಪಾಡಿ ಗ್ರಾಮದ ಹನುಮಂತ ಎಸ್ ಸುಡುಗಾಡಸಿದ್ದ ರವರ ಮಗ. ಹನುಮಂತ ಕಳೆದ 8 ವರ್ಷಗಳಿಂದ ಕರೋಪ್ಪಾಡಿ ಗ್ರಾಮದ ಒಡಿಯೂರು ದೇವಸ್ಥಾನದಲ್ಲಿ ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿದ್ದು, ಮೊದಲನೇ ಮಗ ಗಣೇಶ (15) ಒಡಿಯೂರು ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದ. ಕೊರೊನಾ ಕಾರಣದಿಂದಾಗಿ ಶಾಲೆಗೆ ರಜೆ ಇದ್ದುದರಿಂದ ಮನೆಯಲ್ಲಿದ್ದ ಗಣೇಶ ಆನ್ ಲೈನ್ ಕ್ಲಾಸಿಗಾಗಿ ತನ್ನ ತಂದೆಯ ಬಳಿ ಇದ್ದ ಮೊಬೈಲ್ ಫೋನ್ ಪಡೆದು ಪಬ್ ಜೀ ಗೇಮ್ ಆಡುತ್ತಿದ್ದ ಅದನ್ನು ಗಮನಿಸಿದ ತಂದೆ ಗೇಮ್ ಆಡಬೇಡ ಓದಿಕೋ ಎಂದು ಹಲವಾರು ಬಾರಿ ಬುದ್ಧಿವಾದ ಹೇಳಿದರು ಲೆಕ್ಕಿಸದೆ ಇದ್ದ ಮಗನನ್ನು ಒಡಿಯೂರು ಶಾಲೆಗೆ ಕರೆದುಕೊಂಡು ಹೋಗಿ ಈ ವಿಚಾರವನ್ನು ಶಿಕ್ಷಕರಿಗೆ ತಿಳಿಸಿದಾಗ ಶಿಕ್ಷಕರು ಗಣೇಶನಿಗೆ ಬುದ್ದಿವಾದ ಹೇಳಿ ಸೋಮವಾರದಂದು ಶಾಲೆಗೆ ಬರುವಂತೆ ಹೇಳಿ ಕಳುಹಿಸಿದ್ದರು. ಹನುಮಂತರವರು ಕೆಲಸಕ್ಕೆ ಹೋಗಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಮಗ ಗಣೇಶ ಮನೆಯಲ್ಲಿ ಇರಲಿಲ್ಲ. ಈ ಕುರಿತು ವಿಟ್ಲ ಠಾಣೆಗೆ ದೂರು ನೀಡಲಾಗಿತ್ತು.
Kshetra Samachara
05/01/2021 11:26 pm