ಮಂಗಳೂರು: ಬ್ಯಾಂಕ್ ಖಾತೆದಾರರ ಗಮನಕ್ಕೆ ಬಾರದ ರೀತಿಯಲ್ಲಿ ಖಾತೆಯಿಂದ ಹಣ ದೋಚಿದ ಎರಡು ಪ್ರಕರಣಗಳು ನಗರದ ಸೈಬರ್ ಠಾಣೆಯಲ್ಲಿ ದಾಖಲಾಗಿದೆ.
ನಗರದ ಲಾಲ್ ಬಾಗ್ ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಯನ್ನು ಹೊಂದಿರುವ ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಆಗಂತುಕರು ಖಾತೆದಾರರ ಗಮನಕ್ಕೆ ಬಾರದ ರೀತಿಯಲ್ಲಿ ಹಂತಹಂತವಾಗಿ ಒಟ್ಟು90,600 ರೂ. ನಗದು ಲಪಟಾಯಿಸಿದ್ದಾರೆ.
ಜ.1ರಂದು ಬೆಳಗ್ಗೆ 8 ರಿಂದ 8.15ರ ಒಳಗೆ ಬ್ಯಾಂಕ್ ಖಾತೆಯಿಂದ ಹಣ ದೋಚಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೆನರಾ ಬ್ಯಾಂಕ್ ಕಾವೂರು ಶಾಖೆಯಲ್ಲಿ ಖಾತೆಯನ್ನು ಹೊಂದಿರುವ ಖಾತೆದಾರರೊಬ್ಬರ ಬ್ಯಾಂಕ್ ಖಾತೆಯಿಂದ ಜ.1ರಂದು ರಾತ್ರಿ 8.15 ರಿಂದ ಜ.2ರ ಬೆಳಗ್ಗೆ 8.15ರ ಮಧ್ಯೆ ಒಟ್ಟು 80 ಸಾವಿರ ರೂ. ನಗದು ದೋಚಲಾಗಿದೆ.
ತಮ್ಮ ಬ್ಯಾಂಕ್ ಖಾತೆಯಿಂದ ಹಣ ದೋಚಿರುವುದು ಖಾತೆದಾರರ ಗಮನಕ್ಕೆ ಆಮೇಲೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
04/01/2021 11:57 am