ಕಡಬ: ಕರ್ತವ್ಯ ನಿರತ ಕೊರೊನಾ ವಾರಿಯರ್ ಗೆ ಕೊರೊನಾ ಸೋಂಕಿತರೊಬ್ಬರು ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಬಳಿಕ ಪೊರಕೆಯಲ್ಲಿ ಹಲ್ಲೆ ಮಾಡಿದ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಡಬ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕುಟ್ರುಪಾಡಿ ಗ್ರಾಮದ ಉಳಿಪ್ಪು ಭಾಗದಲ್ಲಿ ಆಶಾ ಕಾರ್ಯಕರ್ತೆ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜೀವಿ ಬಿ.ಎಸ್. ಎಂಬವರು ಹಲ್ಲೆಗೊಳಗಾದವರು.
ಡಿ.16 ರಂದು ಉಳಿಪ್ಪು ನಿವಾಸಿ ಜಿನ್ನಪ್ಪ ಗೌಡ ಎಂಬವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಡಿ.21ರಂದು ಮನೆಗೆ ಭೇಟಿ ನೀಡಿದ ವೇಳೆ ಸೋಂಕಿತ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರ ಪತ್ನಿ ಶೀಲಾವತಿ ಎಂಬವರು ಪೊರಕೆಯಲ್ಲಿ ಆಶಾ ಕಾರ್ಯಕರ್ತೆಗೆ ಯದ್ವಾತದ್ವಾ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಬಳಿಕ ಕಡಬ ಆಸ್ಪತ್ರೆಯ ವೈದ್ಯಾಧಿಕಾರಿಗೆ ಮಾಹಿತಿ ನೀಡಿ, ಕಡಬ ಠಾಣೆಗೆ ಡಿ.21 ರಂದು ದೂರು ನೀಡಿದ್ದಾರೆ.
ಪೊಲೀಸರು ಸೋಂಕಿತನ ಕ್ವಾರಂಟೈನ್ ಮುಗಿದ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ಕ್ವಾರಂಟೈನ್ ಅವಧಿ ಮುಗಿದು ಜಿನ್ನಪ್ಪ ಗೌಡ ಹೊರಗಡೆ ತಿರುಗಾಡುತ್ತಿದ್ದು ಪೊರಕೆಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ ಪ್ರಕರಣವಾದರೂ ಆಸ್ಪತ್ರೆಯಿಂದ ಆಗಲೀ ಠಾಣೆಯಿಂದ ಆಗಲಿ ತನಗೆ ಯಾವುದೇ ರಕ್ಷಣೆ ಸಿಕ್ಕಿಲ್ಲ. ಈ ಮಾನಸಿಕ ವೇದನೆಯಿಂದಾಗಿ ಕರ್ತವ್ಯ ನಿರ್ವಹಿಸಲೂ ಬಹು ಕಷ್ಟವಾಗುತ್ತಿದೆ. ಅಲ್ಲದೆ, ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಕೆಲವರು ಒತ್ತಡ ಹೇರುತ್ತಿದ್ದಾರೆ ಎಂದು ರಾಜೀವಿ ಅವರು ದ.ಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
Kshetra Samachara
26/12/2020 09:10 pm