ಮಂಗಳೂರು: ನಗರ ಹೊರವಲಯದ ಹಾಸ್ಟೆಲ್ ಒಂದಕ್ಕೆ ನುಗ್ಗಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಹಣ ಸುಲಿಗೆ ಮಾಡಿದ ಆರೋಪಿಯ ಆರೋಪ ಸಾಬೀತು ಪಡಿಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮೈಸೂರು ಕೆ.ಆರ್.ನಗರದ ನಾಗೇಶ ಆಲಿಯಾಸ್ ನಾಗು (30) ಶಿಕ್ಷೆಗೊಳಗಾದವ. 2017ರ ಡಿ.5ರಂದು ಮುಂಜಾನೆ ನಾಗೇಶ, ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿ ಅಲ್ಲಿ ಮಲಗಿದ್ದ ವಿದ್ಯಾರ್ಥಿನಿಯ ಕೈ ಕಾಲುಗಳನ್ನು ಕಟ್ಟಿ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದ. ಅಲ್ಲದೆ, ಆಕೆಯ ಬಳಿ ಇದ್ದ ಎಟಿಎಂ ಕಾರ್ಡ್, ಪರ್ಸ್ ಮತ್ತು ಮೊಬೈಲನ್ನು ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ವಾದ, ಪ್ರತಿವಾದ ನಡೆದು ಸೋಮವಾರ ತೀರ್ಪು ನೀಡಿದ ನ್ಯಾಯಾಧೀಶರು, ಅಕ್ರಮ ಪ್ರವೇಶ ಮಾಡಿರುವುದಕ್ಕೆ 7 ವರ್ಷಗಳ ಕಠಿಣ ಶಿಕ್ಷೆ ಮತ್ತು 10,000 ರೂ. ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ 1 ವರ್ಷ ಸಾದಾ ಶಿಕ್ಷೆ, ಸುಲಿಗೆಗೆ 5 ವರ್ಷ ಕಠಿನ ಸಜೆ, 5,000 ರೂ. ದಂಡ, ದಂಡ ಪಾವತಿಗೆ ತಪ್ಪಿದರೆ ಹೆಚ್ಚುವರಿ 1 ವರ್ಷ ಸಾದಾ ಶಿಕ್ಷೆ, ರಾಡ್ ಹಿಡಿದು ಬೆದರಿಕೆ ಹಾಕಿರುವುದಕ್ಕೆ 7 ವರ್ಷಗಳ ಕಠಿಣ ಶಿಕ್ಷೆ, 10,000 ರೂ.ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ 1 ವರ್ಷ ಸಾದಾ ಸಜೆ, ಲೈಂಗಿಕ ದೌರ್ಜನ್ಯ ನಡೆಸಿರುವುದಕ್ಕೆ 5 ವರ್ಷ ಕಠಿನ ಸಜೆ, 5,000 ರೂ. ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ 1 ವರ್ಷ ಸಾದಾ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಸೈದುನ್ನೀಸಾ ತೀರ್ಪು ನೀಡಿದ್ದಾರೆ.
ಸಂತ್ರಸ್ತೆಯ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ ವಾದಿಸಿದ್ದರು.
Kshetra Samachara
28/09/2020 10:47 pm