ಶಿವಮೊಗ್ಗ: ಸಾಗರ ತಾಲೂಕಿನ ಉಳ್ಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಮಂಗಳವಾರ ಬೆಳಗಿನ ಜಾವ ಸುಮಾರು 3.30ರ ಸುಮಾರಿಗೆ ಐವರು ಅಪರಿಚಿತರು ಕಾರನ್ನು ಅಡ್ಡಗಟ್ಟಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ ಎಂದು ಪುತ್ತೂರು ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ನಿವಾಸಿ ಮಹಮ್ಮದ್ ಇರ್ಷಾದ್ ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಮಹಮ್ಮದ್ ಇರ್ಷಾದ್ ಜೇನುಹುಳುಗಳ ವ್ಯಾಪಾರಿಯಾಗಿದ್ದು, ಸಾಗರ ತಾಲೂಕಿನ ಚಿಪ್ಪಳಿ ಗ್ರಾಮದಲ್ಲಿ ಜೇನು ಸಾಕಣೆ ಮಾಡುವ ನಾಗೇಂದ್ರ ಸಾಗರ್ ಅವರಿಗೆ ಜೇನು ಹುಳುಗಳನ್ನು ಸರಬರಾಜು ಮಾಡುತ್ತಿದ್ದರು.
ಅ. 13ರಂದು ತಮ್ಮೂರಿನಿಂದ ಇನೋವಾ ಕಾರಿನಲ್ಲಿ ಹೊರಟ ಇರ್ಷಾದ್ ಮತ್ತು ರಾಜೇಂದ್ರ ಆನಂದಪುರಂ ಮಾರ್ಗವಾಗಿ ಸಾಗರಕ್ಕೆ ಬರುತ್ತಿದ್ದಾಗ ಉಳ್ಳೂರು ಸಮೀಪ ಐವರು ಅಪರಿಚಿತರು ಇನೋವಾ ಕ್ರಿಸ್ಟ್ ಕಾರಿನಲ್ಲಿ ಬಂದು ಅಡ್ಡಗಟ್ಟಿದ್ದಾರೆ.
ಕಾರು ಅಡ್ಡಗಟ್ಟಿದ ಐವರ ಪೈಕಿ ನಾಲ್ಕು ಜನರು ಕೆಳಗೆ ಇಳಿದು ಇರ್ಷಾದ್ ಅವರ ಕುತ್ತಿಗೆಗೆ ಚಾಕು ಹಿಡಿದು ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಇಬ್ಬರು ಕಾರಿನಿಂದ ರಾಜೇಂದ್ರ ಇಳಿಯದಂತೆ ಅಡ್ಡಗಟ್ಟಿದ್ದಾರೆ. ಇನ್ನಿಬ್ಬರು ಇರ್ಷಾದ್ ಅವರ ಪರ್ಸ್‌ನಲ್ಲಿದ್ದ 4,800 ರೂ. ನಗದು ಹಾಗೂ ಕಾರಿನ ಡ್ಯಾಷ್ ಬೋರ್ಡ್‌ನಲ್ಲಿದ್ದ ಸುಮಾರು 10ಸಾವಿರ ರೂ. ಮೌಲ್ಯದ ವಿವೋ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಮಹಮ್ಮದ್ ಇರ್ಷಾದ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
Kshetra Samachara
15/10/2020 11:50 pm