ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಜಂಬು ಜಾತ್ರೆಗೆ ಹೆಸರುವಾಸಿಯಾಗಿರುವ ಕೇಪು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ದೇವಸ್ಥಾನದ ಗರ್ಭಗುಡಿ ಬೀಗ ಒಡೆದು ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬಿ ಹಣ, ಬೆಳ್ಳಿ ವಸ್ತು ದೋಚಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ದೇವಾಲಯದ ಅರ್ಚಕರು ಬೆಳಗ್ಗೆ ದೇವಾಲಯಕ್ಕೆ ಬರುವ ಸಂದರ್ಭ ಗರ್ಭಗುಡಿಯ ಬಾಗಿಲು ತೆರೆದೇ ಇದ್ದುದನ್ನು ಗಮನಿಸಿ, ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಗರ್ಭಗುಡಿ ಹೊರಗೆ ಇದ್ದ ಕಾಣಿಗೆ ಹುಂಡಿ ತುಂಡರಿಸಿದ್ದು, ಅದರಲ್ಲಿ ಹೆಚ್ಚಿನ ನಗದು ಇರಲಿಲ್ಲ ಎನ್ನಲಾಗಿದೆ.
ಗರ್ಭ ಗುಡಿ ಒಳಗೆ ಇದ್ದ ಸುಮಾರು ಅರ್ಧ ಕೆ.ಜಿ. ಗೂ ಅಧಿಕ ತೂಕದ ಬೆಳ್ಳಿ ಸಾಮಗ್ರಿ ಹಾಗೂ ಎರಡು ಕಾಣಿಕೆ ಹುಂಡಿ ತುಂಡರಿಸಿ ಸುಮಾರು 7.5 ಸಾವಿರ ನಗದು ದೂಚಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ರೆಡ್ಡಿ ಹಾಗೂ ತಂಡ ಭೇಟಿ ನೀಡಿದ್ದು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಡೊಂಬ ಹೆಗಡೆ ಅರಸುಮನೆತನದ ಆಡಳಿತಕ್ಕೊಳಪಟ್ಟ ದೇವಾಲಯಗಳಲ್ಲಿ ಪ್ರಮುಖವಾದ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನ ವಿಶೇಷ ಕಾರಣಿಕ ಹೊಂದಿದೆ.
Kshetra Samachara
13/10/2020 05:46 pm