ಮೂಡುಬಿದಿರೆ: ಕಥೆ, ಪರಿಕಲ್ಪನೆ, ಸಂಭಾಷಣೆ, ನಿರ್ದೇಶನದಿಂದ ಹಿಡಿದು ಒಂದು ಚಿತ್ರ ಸಿನಿಪ್ರಿಯರನ್ನು ಮುಟ್ಟುವರೆಗಿನ ಹಂತ ತ್ರಾಸದಾಯಕವಾಗಿದ್ದರೂ, ಕೊನೆಯಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುವುದರ ಜತೆಗೆ ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರಿದರೆ, ಆ ಸಿನಿಮಾ ನಿಜಾರ್ಥದಲ್ಲಿ ಯಶಸ್ವಿಯಾದಂತೆ ಎಂದು ಚಲನಚಿತ್ರ ನಿರ್ದೇಶಕ ಕಿಶೋರ್ ಮೂಡುಬಿದಿರೆ ನುಡಿದರು.
ಆಳ್ವಾಸ್ ಕಾಲೇಜಿನ ಬಿಎಸ್ಸಿ ಅನಿಮೇಷನ್ ಮತ್ತು ವಿಎಫ್‌ಎಕ್ಸ್ ವಿಭಾಗ ಆಯೋಜಿಸಿದ್ದ "ಸಿನಿಮಾ ನಿರ್ಮಾಣದ ಪ್ರಕ್ರಿಯೆಗಳು" ಎಂಬ ವಿಷಯ ಕುರಿತಾದ ಒಂದು ದಿನದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಸಿನಿಮಾ ಎಂಬುದು ಒಬ್ಬ ನಿರ್ದೇಶಕನ ಸೃಜನಾತ್ಮಕ ಉತ್ಪನ್ನ. ವಸ್ತು ವಿಷಯದ ಆಯ್ಕೆ, ಚಿತ್ರೀಕರಣ ಮತ್ತು ಪ್ರದರ್ಶನ ಮಾಡುವ ಕಲೆ ಪ್ರಮುಖ ಪಾತ್ರ ವಹಿಸುತ್ತದೆ. ನಿರ್ದೇಶಕರ ಜೊತೆಗೆ ಅವರ ಸಹಾಯಕರು, ಸಹವರ್ತಿಗಳು, ಕಲಾ ನಿರ್ದೇಶಕರು, ನಟರು, ವಿತರಕರು ಹೀಗೆ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿರುವ ಪ್ರತಿಯೊಬ್ಬರೂ ಒಂದು ಚಿತ್ರ ನಿರ್ಮಾಣದಲ್ಲಿ ಪ್ರಮುಖರಾಗಿರುತ್ತಾರೆ.
ಇವರೆಲ್ಲರ ಸತತ ಪ್ರಯತ್ನದಿಂದಾಗಿ ಒಂದು ಸಿನೆಮಾ ಯಶಸ್ವಿಯಾಗಿ ಪ್ರೇಕ್ಷಕರನ್ನು ತಲುಪುತ್ತದೆ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಕಾರ್ಯಕ್ರಮ ಉದ್ಘಾಟಿಸಿದರು. ವಿಭಾಗದ ಮುಖ್ಯಸ್ಥ ರವಿಚಂದ್ರ ಮೂಡುಕೊಣಾಜೆ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
23/05/2022 09:39 pm