ಮಂಗಳೂರು: ಆಳ ಕಡಲ ಮೀನುಗಾರಿಕೆ ನಡೆಸಲು ತೆರಳಿದ್ದ ಒಡಿಶಾ ಮೂಲದ ಮೀನುಗಾರನೋರ್ವ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ನರೇಂದ್ರ ಸಾಯಿ (32) ನಾಪತ್ತೆಯಾದ ಮೀನುಗಾರ. ಜ.21ರಂದು ರಾತ್ರಿ ವೇಳೆಗೆ ಬೆಂಗರೆ ನಿವಾಸಿ ಕೇಶವ ಸಾಲ್ಯಾನ್ ಎಂಬವರಿಗೆ ಸೇರಿದ 'ಹನುಮಾನ್' ಆಳಕಡಲ ಬೋಟ್ ನಲ್ಲಿ 9 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಸುಮಾರು 40 ನಾಟಿಕಲ್ ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ನರೇಂದ್ರ ಅಚಾನಕ್ ನಾಪತ್ತೆಯಾಗಿದ್ದಾರೆ. ವಿಷಯ ತಿಳಿದ ಬಳಿಕ ಉಳಿದವರು ಹುಡುಕಾಟ ನಡೆಸಿದರೂ ನರೇಂದ್ರನ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೋಟ್ ಚಾಲಕ ಎಂ. ಪಾಂಡಿ ಅವರು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Kshetra Samachara
26/01/2021 12:36 pm