ಜೈಪುರ್: ಇಬ್ಬರು ಮತಾಂಧರಿಂದ ಕೊಲೆಗೀಡಾದ ರಾಜಸ್ಥಾನದ ಕನ್ಹಯ್ಯ ಲಾಲ್ ಅಂತ್ಯಕ್ರಿಯೆಯು ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ನೆರವೇರಿತು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಂತ್ಯಸಂಸ್ಕಾರದ ವೇಳೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ಮೊಹಮ್ಮದ್ ಪೈಗಂಬರ್ ಬಗೆಗಿನ ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಂಚಿಕೊಂಡ ಕಾರಣಕ್ಕೆ ಕನ್ಹಯ್ಯ ಲಾಲ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಬಳಿಕ ಮತಾಂಧರು ಕನ್ಹಯ್ಯ ಲಾಲ್ ಅವರ ಶಿರಚ್ಛೇದ ಮಾಡಿದ್ದ ವಿಡಿಯೋವನ್ನು ವೈರಲ್ ಮಾಡಿದ್ದರು. ಇಂದು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ನಂತರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಉದಯಪುರದ ಅಶೋಕ ನಗರ ರುದ್ರಭೂಮಿಯವರೆಗೆ ಅಂತಿಮಯಾತ್ರೆ ನಡೆಸಲಾಯಿತು. ಅಂತ್ಯಸಂಸ್ಕಾರದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಅಲ್ಲದೇ, ಅಂತಿಮ ಯಾತ್ರೆಯಲ್ಲಿ ಬೈಕ್, ಕಾರುಗಳ ಮೂಲಕವೂ ಜನರು ಪಾಲ್ಗೊಂಡಿದ್ದರು. ಇದೇ ವೇಳೆ ಕನ್ಹಯ್ಯ ಲಾಲ್ ಅಮರ್ ರಹೇ ಹಾಗೂ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಘೋಷಣೆಗಳನ್ನು ಕೂಗಿದರು. ಒಟ್ಟಾರೆ ಶಾಂತಿಯುತವಾಗಿ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ಜರುಗಿತು.
PublicNext
29/06/2022 05:19 pm