ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಕೋಮು ಸಂಘರ್ಷ ಹಾಗೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣ ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ಎಸ್‌ಪಿಗಳಿಗೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೊಸ ಟಾಸ್ಕ್ ನೀಡಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಆಯಾ ಎಸ್‌ಪಿ ಜವಾಬ್ದಾರಿಯಾಗಿರುತ್ತಾರೆ. ಅಪರಾಧ ಬಗ್ಗೆ ಮಾಹಿತಿ ಪಡೆಯೋದು ಗಂಭೀರ ಅಪರಾಧ ಕೃತ್ಯಗಳು ನಡೆದಾಗ ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸೋದು ಕಡ್ಡಾಯ ಅಂತ ಅಲೋಕ್ ಕುಮಾರ್ ವಾರ್ನಿಂಗ್ ಕೊಟ್ಟಿದ್ದಾರೆ. ಅಹಿತಕರ ಘಟನೆ ನಡೆದಾಗ ಸ್ಥಳಕ್ಕೆ ಮಹಜರ್ ಮಾಡಿಸಿ ತ್ವರಿತಗತಿಯಲ್ಲಿ ಪ್ರಕರಣ ಬೇಧಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಲಾ ಅಂಡ್ ಆರ್ಡರ್ ಕಾಪಾಡುವ ಜವಾಬ್ದಾರಿ ಅಲೋಕ್ ಕುಮಾರ್ ಅವರ ಮೇಲಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಹಂತ-ಹಂತವಾಗಿ ಜಿಲ್ಲಾ ಎಸ್‌ಪಿಗಳೊಂದಿಗೆ ವರ್ಚುವಲ್ ಸಭೆ ನಡೆಸುತ್ತಿದ್ದಾರೆ. ಇನ್ನು ಕೆಲ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಎಸ್‌ಪಿಗಳೊಂದಿಗೆ ಸಭೆ ನಡೆಸಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ದಾಖಲಾಗುವ ಎಫ್ಐಆರ್ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು. ತುರ್ತು ಸಂದರ್ಭ ಹೊರತುಪಡಿಸಿ ಪ್ರತಿದಿನ ಎಸ್‌ಪಿ ಕಚೇರಿಗೆ ಬರಬೇಕು. ಲ್ಯಾಂಡ್ ಲೈನ್ ಮೂಲಕವೇ ಕರೆ ಮಾಡಲು ಆದ್ಯತೆ ನೀಡಬೇಕು. ನಿಯಮ ಮೀರಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆಯುವ ಸಣ್ಣ ಘಟನೆಗಳು ದೊಡ್ಡ ಅಪರಾಧ ಪ್ರಕರಣಗಳಿಗೆ ಕಾರಣವಾಗುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವ ಬಗ್ಗೆ ಅರಿತಿರುವ ಎಡಿಜಿಪಿ, ನಿರ್ಲಕ್ಷ್ಯ ಮಾಡದೆ ಪ್ರಾರಂಭಿಕ ಹಂತದಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವತ್ತ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಧಾರ್ಮಿಕ ಸಂಘರ್ಷಕ್ಕೆ ಎಡೆಮಾಡಿಕೊಡದೆ ಆರಂಭದಲ್ಲಿ ಬಗೆಹರಿಸಬೇಕು. ಆಯಾ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಹೆಚ್ಚಿಸಬೇಕು. ಮರಳು ದಂಧೆ, ಮಟ್ಕಾ ದಂಧೆ ಸೇರಿದಂತೆ ಇನ್ನಿತರ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಏನೇ ಸಣ್ಣ ಅಪರಾಧವಾಗಿ ಎಫ್ಐಆರ್ ದಾಖಲಾದರೂ ಎಸ್‌ಪಿಗಳ ಗಮನಕ್ಕೆ ಇರಬೇಕು. ಸ್ಥಳೀಯ ಹಾಗೂ ನಗರ ಪ್ರದೇಶಗಳಲ್ಲಿ ಮಫ್ತಿ ಪೊಲೀಸರ ಸಂಖ್ಯೆ ಹೆಚ್ಚಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಇದರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳ ಬಗ್ಗೆ ಹೆಚ್ಚು ನಿಗಾವಹಿಸಲು ಸೂಚಿಸಲಾಗಿದೆ. ಪ್ರಮುಖವಾಗಿ ಧರ್ಮದ ಸೂಕ್ಷ್ಮ ವಿಚಾರಗಳ ಪೋಸ್ಟ್ ಬಗ್ಗೆ ನಿಗಾವಹಿಸಬೇಕು. ಇದಕ್ಕಾಗಿ ನುರಿತ ಸಿಬ್ಬಂದಿ ಮತ್ತು ಉಪಕರಣಗಳ ವ್ಯವಸ್ಥೆ ಹೆಚ್ಚಿಸಬೇಕು. ಈ ಹಿಂದೆ ನಡೆದ ಹುಬ್ಬಳಿ ಸಂಘರ್ಷ, ಮೈಸೂರು ಗ್ಯಾಂಗ್ ರೇಪ್, ಮಂಗಳೂರು ಮಳಲಿ ಮಸೀದಿ ವಿಚಾರ ಸೇರಿ ಹಲವು ಗಂಭೀರ ಘಟನೆಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದಿರುವ ಅಲೋಕ್ ಕುಮಾರ್ ಭವಿಷ್ಯದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಪಿಗಳಿಗೆ ಅಲೋಕ್ ಕುಮಾರ್ ಟಾಸ್ಕ್ ನೀಡಿದ್ದಾರೆ.
PublicNext
03/06/2022 10:23 pm