ಕೊಚ್ಚಿ: ಮಾಸ್ಕ್ ಧರಿಸಿದ್ದರಿಂದ ಗುರುತು ಸಿಗದೆ ಟ್ರಾಫಿಕ್ ಶಿಕ್ಷೆ ವಿಧಿಸಿದ ಮಹಿಳಾ ಪೇದೆ ಮೇಲೆ ಕೆಲಸಕ್ಕೆ ಸೇರಿದ ಮೊದಲ ವಾರದಲ್ಲೇ ಲೇಡಿ ಡಿಸಿಪಿ ದರ್ಪ ತೋರಿದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಕೊಚ್ಚಿಯಲ್ಲಿ ಜನವರಿ 1ರಂದು ಡಿಸಿಪಿ ಆಗಿ ಐಶ್ವರ್ಯಾ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಭಾನುವಾರ ಸ್ಥಳೀಯ ಪೊಲೀಸ್ ಠಾಣೆಗೆ ಇನ್ಸ್ಪೆಕ್ಷನ್ಗೆ ತೆರಳಿದ್ದಾರೆ. ಈ ವೇಳೆ ಪೊಲೀಸ್ ಸಮವಸ್ತ್ರವನ್ನು ಧರಿಸದೆ, ಸಾಮಾನ್ಯ ಬಟ್ಟೆಯಲ್ಲೇ ಹೋಗಿದ್ದಾರೆ. ಪೊಲೀಸ್ ಕಾರನ್ನು ಠಾಣೆಯಿಂದ ಸ್ವಲ್ಪ ದೂರದಲ್ಲೇ ನಿಲ್ಲಿಸಿ ಮಾಸ್ಕ್ ಧರಿಸಿ, ಠಾಣೆಗೆ ಕಾಲಿಟ್ಟಿದ್ದಾರೆ.
ಮಹಿಳಾ ಪೊಲೀಸ್ ಪೇದೆಯೊಬ್ಬರು ಐಶ್ವರ್ಯಾ ಅವರನ್ನು ದಾರಿಯಲ್ಲೇ ತಡೆದು, ಏನಾಗಬೇಕಿತ್ತು ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಐಶ್ವರ್ಯ ಆ ಪೇದೆಗೆ ಶಿಕ್ಷೆ ನೀಡಿದ್ದಾರೆ. ಎರಡು ದಿನಗಳ ಕಾಲ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಲಾಗಿದೆ.
ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಡಿಸಿಪಿ ಐಶ್ವರ್ಯಾ, ''ಪೊಲೀಸರು ಯಾವಾಗಲೂ ಅಲರ್ಟ್ ಆಗಿರಬೇಕು. ಉನ್ನತ ಅಧಿಕಾರಿಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ಹೀಗಾಗಿ ಮಹಿಳಾ ಪೇದೆಗೆ ಶಿಕ್ಷೆ ನೀಡಿದ್ದೇನೆ'' ಎಂದು ಹೇಳಿದ್ದಾರೆ.
ಆದರೆ ಹಿರಿಯ ಅಧಿಕಾರಿಗಳು ಐಶ್ವರ್ಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ''ಐಶ್ವರ್ಯ ಅಧಿಕಾರ ವಹಿಸಿಕೊಂಡು ಕೇವಲ ಒಂದು ವಾರವಷ್ಟೇ ಆಗಿದೆ. ಅದರಲ್ಲೂ ಮಾಸ್ಕ್ ಧರಿಸಿದಾಗ ನಮ್ಮವರನ್ನೇ ಗುರುತಿಸುವುದು ಕಷ್ಟ. ಹೀಗಿರುವಾಗ ಆಕೆಯನ್ನು ಗುರುತಿಸುವುದು ಪೇದೆಗೆ ಕಷ್ಟವಾಗಿದೆ. ಹೀಗಾಗಿ ಪೇದೆ ವಿಚಾರಣೆ ಮಾಡಿದ್ದಾರೆ'' ಎಂದು ಹೇಳಿದ್ದಾರೆ.
PublicNext
14/01/2021 09:10 pm