ನವದೆಹಲಿ: ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಖಾಲಿಸ್ತಾನಿಗಳು ನುಸುಳಿದ್ದಾರೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೃಷಿ ಕಾನೂನುಗಳ ವಿರುದ್ಧ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠಕ್ಕೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಈ ಮಾಹಿತಿ ನೀಡಿದ್ದಾರೆ.
ಕೃಷಿ ಕಾನೂನುಗಳನ್ನು ಬೆಂಬಲಿಸುವ ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಖಲಿಸ್ತಾನ ಪರ ಸಮಾವೇಶಗಳನ್ನು ಆಯೋಜಿಸಿದ್ದವರು ಪ್ರತಿಭಟನೆಯಲ್ಲಿ ಧ್ವಜವನ್ನು ಹಾರಿಸಿದ್ದರು ಎಂದರು. ಆರೋಪಗಳನ್ನು ಖಚಿತಪಡಿಸಬಹುದೇ ಎಂದು ಎಸ್.ಎ.ಬೋಬ್ಡೆ ಅವರು ಅಟಾರ್ನಿ ಜನರಲ್ ಅವರನ್ನು ಕೇಳಿದರು. ಜೊತೆಗೆ ನಿಷೇಧಿತ ಸಂಘಟನೆ ಪ್ರತಿಭಟನೆಯಲ್ಲಿ ಒಳ ನುಸುಳಿದ್ದರೆ, ಯಾರಾದರೂ ಇಲ್ಲಿ ದಾಖಲೆ ಸಮೇತ ಆರೋಪ ಮಾಡುತ್ತಿದ್ದರೆ ನೀವು ಅದನ್ನು ದೃಢೀಕರಿಸಬೇಕು. ನಾಳೆಯೊಳಗೆ ನೀವು ಅಫಿಡವಿಟ್ ಸಲ್ಲಿಸಬೇಕು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್ ಅವರು, ರೈತರ ಪ್ರತಿಭಟನೆಯಲ್ಲಿ ಖಾಲಿಸ್ತಾನಿಗಳು ನುಸುಳಿರುವ ಬಗ್ಗೆ ಗುಪ್ತಚರ ಇಲಾಖೆಯ ಅಗತ್ಯ ಮಾಹಿತಿಯೊಂದಿಗೆ ನಾಳೆಯೊಳಗೆ ಅಫಿಡವಿಟ್ ಸಲ್ಲಿಸುವುದಾಗಿ ತಿಳಿಸಿದ್ದಾರೆ.
PublicNext
12/01/2021 08:04 pm