ಮೈಸೂರು: ಸೆ.21ರಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗಲಿವೆ ಎಂಬ ಎಂಬ ಗೊಂದಲಕ್ಕೆ ಬ್ರೇಕ್ ಹಾಕಿರುವ ಶಿಕ್ಷಣ ಸಚಿವ ಸುರೇಶ್‍ಕುಮಾರ್, ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡುತ್ತಿಲ್ಲ, ಸೆ.21ರಿಂದ ಶಾಲೆಗಳು ಪ್ರಾರಂಭವಾಗಲಿವೆ. ಆದರೆ, ತರಗತಿಗಳು ಪ್ರಾರಂಭವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗ ಪಠ್ಯದ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಅನುಮತಿ ಸಿಕ್ಕಿದೆ. ಅದು ಕಡ್ಡಾಯ ಅಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡುತ್ತಿಲ್ಲ, ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು. ಈಗ ಅನುಮತಿ ಸಿಕ್ಕಿರುವುದು ಪಠ್ಯದ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಮಾತ್ರ. ಸೆಪ್ಟೆಂಬರ್ 21 ರಿಂದ ಎಲ್ಲಾ ಶಿಕ್ಷಕರು ಶಾಲೆಗೆ ಬರಬೇಕು, 9, 10, 11, 12ನೇ ತರಗತಿವಿದ್ಯಾರ್ಥಿಗಳಿಗೆ ಪಠ್ಯದ ಬಗ್ಗೆ ಯಾವುದೇ ಗೊಂದಲವಿದ್ದರೆ ಅದನ್ನು ಪರಿಹರಿಸಿಕೊಳ್ಳಲು ಮಾತ್ರ ಅವಕಾಶ ಇರುತ್ತದೆ, ಆದರೆ ದೈನಂದಿನ ತಗರತಿಗೆ ಅವಕಾಶವಿಲ್ಲ
ಕೇವಲ ಒಂದು ಅವಧಿಯ ಶುಲ್ಕವನ್ನು ಮಾತ್ರ ಖಾಸಗಿ ಶಾಲೆ ಪಡೆಯಬೇಕು. ಒಂದು ವೇಳೆ ಸಮಸ್ಯೆ ಆದರೆ ಡಿಡಿಪಿಐ, ಬಿಇಒ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಅವರಿಗೆ ಈಗಾಗಲೇ ಸರ್ಕಾರದಿಂದ ಸೂಚನೆ ಕೊಟ್ಟಿದ್ದೇವೆ. ಯಾವುದೇ ಪೋಷಕರಿಗೆ ಇದರಿಂದ ಸಮಸ್ಯೆ ಆದರೆ ಬಿಇಒ ಅವರನ್ನು ಸಂಪರ್ಕಿಸಿ ಎಂದು ಹೇಳಿದರು.
ಶಾಲೆಯನ್ನು ಮತ್ತೆ ಆರಂಭಿಸಲು ಕೇಂದ್ರದ ಅನುಮತಿ ಬೇಕು. ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುವವರೆಗೂ ತರಗತಿಗಳು ನಡೆಯುವುದಿಲ್ಲ, ಶಾಲೆಗೆ ಬರಲು ವಿದ್ಯಾರ್ಥಿಗಳು ಉತ್ಸಾಹಕರಾಗಿದ್ದಾರೆ. ಆದರೆ ಪೋಷಕರಿಗೆ ಇನ್ನೂ ಆತಂಕವಿದೆ. ಹೀಗಾಗಿ ಪೋಷಕರಿಂದ ಕೂಡ ಒಂದು ಅನುಮತಿ ಪತ್ರವನ್ನು ತೆಗೆದುಕೊಳ್ಳುತ್ತೇವೆ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂತಹ ಯಾವುದೇ ಸಾಧ್ಯತೆಗಳು ರಾಜ್ಯದಲ್ಲಿ ಇಲ್ಲ. ಶೇ.100ಕ್ಕೆ ನೂರಷ್ಟು ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ. ಇನ್ನೂ ಸಚಿವ ಸಂಪುಟ ವಿಸ್ತರಣೆ ವಿಚಾರ ಅದು ಸಿಎಂ ಪರಮಾಧಿಕಾರ. ಹೀಗಾಗಿ ಆ ಬಗ್ಗೆ ಸಿಎಂ ಯಡಿಯೂರಪ್ಪ ಅವರೇ ತೀರ್ಮಾನ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತಾರೆ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
PublicNext
18/09/2020 03:46 pm