ನವದೆಹಲಿ: ಬಾಲಿವುಡ್ ಸಿಂಗರ್ ಯೋ ಯೋ ಹನಿ ಸಿಂಗ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಡಿನ ಮೂಲಕ ಮೋಡಿ ಮಾಡಿದ್ದ ಹನಿ ಸಿಂಗ್ ವಿರುದ್ಧ ಕೌಟಂಬಿಕ ದೌರ್ಜನ್ಯ ಕೇಸ್ ದಾಖಲಾಗಿದೆ. ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ಪತಿಯಿಂದ ರಕ್ಷಣೆ ಕೋರಿ ದೆಹಲಿಯ ತಿಝ್ ಹಜಾರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ 2011ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹತ್ತು ವರ್ಷಗಳ ಕಾಲ ಹನಿ ಸಿಂಗ್ ಜೊತೆ ದಾಂಪತ್ಯ ಜೀವನ ನಡೆಸಿರುವ ಶಾಲಿನಿ ಅನೇಕ ಹಿಂಸೆ ಅನುಭವಿಸಿದ್ದಾರೆ. ಇಷ್ಟು ದಿನಗಳ ಕಾಲ ಗೌಪ್ಯವಾಗಿದ್ದ ತಮ್ಮ ಸಂಸಾರದ ಕಹಿ ಸತ್ಯಗಳನ್ನೆಲ್ಲ ಶಾಲಿನಿ ತಲ್ವಾರ್ ಬಹಿರಂಗಪಡಿಸಿದ್ದಾರೆ. ಹನಿ ಸಿಂಗ್ ಅವರ ಕರಾಳ ಮುಖವನ್ನು ಅವರು ಬಯಲು ಮಾಡಿದ್ದಾರೆ. ಕೋರ್ಟ್ಗೆ ಸಲ್ಲಿಸಿದ ದೂರಿನಲ್ಲಿ ಅವರು ಎಲ್ಲವನ್ನೂ ವಿವರಿಸಿದ್ದಾರೆ. ಶಾಲಿನ ಮಾಡಿರುವ ಪ್ರಮುಖ ಆರೋಪಗಳ ಪಟ್ಟಿ ಇಲ್ಲಿದೆ.
* ಅನೇಕ ಮಹಿಳೆಯರ ಜೊತೆ ಹನಿ ಸಿಂಗ್ ಸಹಜ ಎಂಬಂತೆ ಲೈಂಗಿಕ ಕ್ರಿಯೆ ನಡೆಸುತ್ತಾರೆ.
* ಅನೇಕ ಬಾರಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಮೌಖಿಕವಾಗಿ ನನ್ನ ಮೇಲೆ ಹನಿ ಸಿಂಗ್ ಹಲ್ಲೆ ಮಾಡಿದ್ದಾರೆ.
* ಎಲ್ಲ ಸಂಭಾವನೆಯನ್ನು ನಗದು ರೂಪದಲ್ಲೇ ಹನಿ ಸಿಂಗ್ ಪಡೆಯುತ್ತಾರೆ. ಹಣದ ವ್ಯವಹಾರವನ್ನು ನನ್ನಿಂದ ಮುಚ್ಚಿಟ್ಟಿದ್ದಾರೆ.
* ತಿಂಗಳಿಗೆ ನಾಲ್ಕು ಕೋಟಿ ರೂ. ಸಂಪಾದಿಸುತ್ತಿದ್ದ ಹನಿ ಸಿಂಗ್ ಮದ್ಯವ್ಯಸನಿ ಆಗಿದ್ದಾರೆ. ಆಗಲೇ ಅವರು ಡ್ರಗ್ ಅಡಿಕ್ಟ್ ಕೂಡ ಆದರು.
* ಪಂಜಾಬಿ ನಟಿಯೊಬ್ಬರ ಜೊತೆ ಹನಿ ಸಿಂಗ್ ಅಕ್ರಮ ಸಂಬಂಧ ಹೊಂದಿದ್ದಾರೆ.
* ನನ್ನ ಜೊತೆ ಮದುವೆ ಆಗಿದೆ ಎಂಬ ಸತ್ಯವನ್ನು ಜನರಿಂದ ಹಲವು ವರ್ಷಗಳವರೆಗೆ ಹನಿ ಸಿಂಗ್ ಮುಚ್ಚಿಟ್ಟಿದ್ದರು.
* ನಮ್ಮ ಮದುವೆಯ ಫೋಟೋಗಳು ಇಂಟರ್ನೆಟ್ನಲ್ಲಿ ಲೀಕ್ ಆಗಿದ್ದಕ್ಕೆ ನಾನೇ ಕಾರಣ ಎಂದು ಅವರು ಅನುಮಾನಪಟ್ಟಿದ್ದರು ಹಾಗೂ ಕೋಪಗೊಂಡು ನನ್ನನ್ನು ಮನಬಂದಂತೆ ಥಳಿಸಿದ್ದರು.
* ನಮ್ಮ ಮದುವೆ ಉಂಗುರವನ್ನು ಹನಿ ಸಿಂಗ್ ಧರಿಸುತ್ತಿರಲಿಲ್ಲ. ಅದು ತನಗೆ ದುರದೃಷ್ಟ ಎಂದು ಅವರು ಹೇಳುತ್ತಿದ್ದರು.
* ಮಹಿಳಾ ಸಹೋದ್ಯೋಗಿಗಳ ಜೊತೆ ಹನಿ ಸಿಂಗ್ ಅಕ್ರಮ ಸಂಬಂಧ ಹೊಂದಿದ್ದರು. ಅದು ನನಗೆ ಗೊತ್ತಾಗಿ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಬಿಯರ್ ಬಾಟಲಿ ಒಡೆದಿದ್ದರು.
ಈ ಸಂಬಂಧ ವಿಚಾರಣೆ ಆರಂಭಿಸಿರುವ ನ್ಯಾಯಾಲಯವು ಆರೋಪಗಳ ಕುರಿತು ಸ್ಪಷ್ಟನೆ ನೀಡುವಂತೆ ಹನಿ ಸಿಂಗ್ಗೆ ನೋಟಿಸ್ ಜಾರಿ ಮಾಡಿದೆ. ಶಾಲಿನಿ ಪರವಾಗಿ ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಪತ್ನಿಯ ಜೊತೆ ಜಂಟಿ ಒಡೆತನದಲ್ಲಿ ಇರುವ ಯಾವುದೇ ಆಸ್ತಿಯನ್ನೂ ಮಾರಾಟ ಮಾಡದಂತೆ ಹನಿ ಸಿಂಗ್ಗೆ ನ್ಯಾಯಾಲಯ ಸೂಚಿಸಿದೆ.
PublicNext
04/08/2021 05:55 pm