ನವದೆಹಲಿ: ಪೇಟಿಎಂ ಸಂಸ್ಥಾಪಕ ಮತ್ತು ಸಿಇಓ ವಿಜಯ್ ಶೇಖರ್ ಶರ್ಮಾ ಅವರನ್ನು ದೆಹಲಿ ಪೊಲೀಸರು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಅನ್ನೋ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಪೇಟಿಎಂ ಸಂಸ್ಥಾಪಕರಾದ ವಿಜಯ್ ಜಾಗ್ವಾರ್ ಲ್ಯಾಂಡ್ ರೋವರ್ ಚಾಲನೆ ವೇಳೆ ದಕ್ಷಿಣ ದೆಹಲಿಯ ಜಿಲ್ಲಾ ಪೊಲೀಸ್ ಆಯುಕ್ತರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ, ಫೆಬ್ರವರಿ 22ರಂದು ಮದರ್ ಇಂಟರ್‌ನ್ಯಾಶನಲ್ ಸ್ಕೂಲ್ ಹೊರಗೆ ಡಿಸಿಪಿ ಬೆನಿಟಾ ಮೇರಿ ಜೈಕರ್ ಅವರ ಕಾರಿಗೆ ವೇಗವಾಗಿ ಬಂದ ಲ್ಯಾಂಡ್ ರೋವರ್ ಡಿಕ್ಕಿ ಹೊಡೆದಿದೆ. ಆದರೆ ಶರ್ಮಾ ವಾಹನ ನಿಲ್ಲಿಸದೆ ಮುಂದೆ ಸಾಗಿದ್ದರು.
ಡಿಸಿಪಿ ಅವರ ಕಾರನ್ನು ಆಕೆಯ ಚಾಲಕ, ಕಾನ್‌ಸ್ಟೆಬಲ್ ದೀಪಕ್ ಕುಮಾರ್ ಓಡಿಸುತ್ತಿದ್ದರು. ಸಿಇಒ ವಿಜಯ್ ಶೇಖರ್ ಶರ್ಮಾ ಕಾರು ಡಿಕ್ಕಿ ಹೊಡೆದಾಗ ಚಾಲಕ ಕುಮಾರ್ ಅವರು ಲ್ಯಾಂಡ್ ರೋವರ್ ನಂಬರನ್ನು ನಮೂದಿಸಿದರು ಮತ್ತು ತಕ್ಷಣ ಡಿಸಿಪಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಬೆನಿಟಾ ಮೇರಿ ಜಾಕರ್ ಕಾರಿಗೆ ಗುದ್ದಿದ ಆರೋಪದ ಮೇಲೆ ವಿಜಯ್ ಶೇಖರ್ ಶರ್ಮಾ ವಿರುದ್ಧ ಕಾನ್‌ಸ್ಟೆಬಲ್ ದೀಪಕ್ ಕುಮಾರ್ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್‌ನ ಪ್ರಕಾರ, ದೆಹಲಿಯ ಅರಬಿಂದೋ ಮಾರ್ಗದಲ್ಲಿರುವ ಮದರ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಹೊರಗೆ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
PublicNext
13/03/2022 12:55 pm