ಟೆಹ್ರಾನ್: ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸದ ಕಾರಣಕ್ಕಾಗಿ ಇರಾನ್ನಲ್ಲಿ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿ, ವ್ಯಾನ್ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ಘಟನೆಯ ನಂತರ ಇರಾನ್ನಲ್ಲಿ ಮಹಿಳೆಯರು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಐದನೆ ದಿನವೂ ಮುಂದುವರೆದಿದೆ.
ಕುರ್ದಿಸ್ತಾನ್ ಪ್ರಾಂತ್ಯದ ಮಹ್ಸಾ ಆಮಿನಿ ಎಂಬ 22 ವರ್ಷದ ಯುವತಿ ಪೊಲೀಸರ ದೌರ್ಜನ್ಯಕ್ಕೆ ಬಲಿಯಾದವಳು. ಸಂಬಂಧಿಕರನ್ನು ಭೇಟಿಯಾಗಲು ಆಮಿನಿ ಪಶ್ಚಿಮ ಪ್ರಾಂತ್ಯವಾದ ಕುರ್ದಿಸ್ತಾನದಿಂದ ಇರಾನ್ನ ರಾಜಧಾನಿ ತೆಹರಾನ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಹಿಳೆಯರ ವಸ್ತ್ರಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಆಕೆಯನ್ನು ಬಂಧಿಸಿ ಹಿಂಸೆ ನೀಡಲಾಗಿತ್ತು. ನಂತರ ಆಕೆ ಮೃತಪಟ್ಟಿದ್ದಳು. ಇಲ್ಲಿಂದ ಶುರುವಾಗಿರುವ ಮಹಿಳೆಯರ ಆಕ್ರೋಶ ಇನ್ನೂ ನಿಂತಿಲ್ಲ.
ಪ್ರತಿಭಟನೆಯಲ್ಲಿಏಳು ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಈ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆಯುತ್ತಿದ್ದಂತೆಯೇ ಸರ್ಕಾರವು ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿದೆ. ಇರಾನ್ನ 50ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರತಿಭಟನೆ ಹಿನ್ನೆಲೆ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.
ನೆಟ್‌ಬ್ಲಾಕ್‌ಗಳು ನೀಡಿದ ಮಾಹಿತಿ ಅನ್ವಯ ಇಲ್ಲಿನ ನಾಗರಿಕರಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸಿವೆ. ವಾಟ್ಸ್ಆ್ಯಪ್ ಬಳಕೆದಾರರು ಮೆಸೇಜ್ ಮಾತ್ರ ಕಳಹಿಸಬಹುದಾಗಿದ್ದು, ಫೋಟೋ ಕಳುಹಿಸಲು ಸಾಧ್ಯವಿಲ್ಲ. ಕುರ್ದಿಸ್ತಾನ್ ಪ್ರಾಂತ್ಯದಲ್ಲಿ ಇಂಟರ್ನೆಟ್ ಸಂಪೂರ್ಣ ಸ್ಥಗಿತಗೊಂಡಿದೆ.
PublicNext
22/09/2022 04:17 pm