ಟೋಕಿಯೊ: ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಮೇಲೆ ಆಗುಂತಕನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿರುವ ಸಂಗತಿ.
ಶುಕ್ರವಾರ ಹತ್ಯೆ ನಡೆದಿದ್ದು, ಇಂದು ಮಂಗಳವಾರ ಶಿಂಜೊ ಅಬೆ ಅವರಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು.
ಝೊಜೊಜಿ ದೇವಸ್ಥಾನದ ಬಳಿ ನಡೆದ ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ನಾಗರಿಕರು ಭಾಗವಹಿಸಿದ್ದರು. ಅವರೆಲ್ಲಾ ಕೈಬೀಸಿ ತಮ್ಮ ನೆಚ್ಚಿನ ನಾಯಕನಿಗೆ ವಿದಾಯ ಹೇಳಿದರು. ‘ಸೂರ್ಯ ಮುಳುಗುತ್ತಿದ್ದಾನೆ’ ಎಂಬ ಘೋಷಣೆಯನ್ನೂ ಕೂಗಿದರು.
ಆಪ್ತರು, ಶಿಂಜೊ ಅವರ ಭಾವಚಿತ್ರದ ಎದುರು ಹೂಗುಚ್ಛ ಇಟ್ಟು ಗದ್ಗದಿತರಾದರು. ಜಪಾನ್ ನ ಪ್ರಧಾನಿ ಫುಮಿಯೊ ಕಿಶಿಡಾ, ಲಿಬರಲ್ ಡೆಮಾಕ್ರಟಿಕ್ ಪಕ್ಷದ ಮುಖಂಡರು, ಶಿಂಜೊ ಪತ್ನಿ ಅಕೀ ಅಬೆ ಹಾಗೂ ಕುಟುಂಬ ಸದಸ್ಯರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಅಂತ್ಯಕ್ರಿಯೆಗೂ ಮುನ್ನ ಶಿಂಜೊ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಕೈಗೊಳ್ಳಲಾಗಿತ್ತು.
PublicNext
12/07/2022 05:36 pm