ಒಟ್ಟಾವಾ: ಕರುನಾಡಿನ ಹೆಮ್ಮೆಯ ಪುತ್ರ ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿದ್ದಾರೆ. ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುವ ತಮ್ಮ ಭಾಷಣದ ವಿಡಿಯೋವನ್ನು ಅವರು ಟ್ವೀಟ್ ಮಾಡಿದ್ದಾರೆ.
'ಕೆನಡಾದ ಸಂಸತ್ತಿನಲ್ಲಿ ನಾನು ನನ್ನ ಮಾತೃಭಾಷೆ (ಮೊದಲ ಭಾಷೆ) ಕನ್ನಡದಲ್ಲಿ ಮಾತನಾಡಿದ್ದೇನೆ. ಈ ಸುಂದರ ಭಾಷೆ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಸುಮಾರು 50 ಮಿಲಿಯನ್ ( 5 ಕೋಟಿ) ಜನರು ಮಾತನಾಡುತ್ತಾರೆ. ಭಾರತದ ಹೊರಗಿನ ಜಗತ್ತಿನ ಯಾವುದೇ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು' ಎಂದು ಚಂದ್ರ ಆರ್ಯ ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಚಂದ್ರ ಆರ್ಯ ಯಾರು?:
ಚಂದ್ರ ಆರ್ಯ ಅವರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದವರು. 2019ರ ಅಕ್ಟೋಬರ್‌ನಲ್ಲಿ ನಡೆದ ಕೆನಡಾ ಸಂಸತ್ ಚುನಾವಣೆಯಲ್ಲಿ ಕೆನಡಾದ ನೇಪಿಯನ್ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ಲಿಬರಲ್ ಪಕ್ಷದಿಂದ ಸ್ಪರ್ಧಿಸಿದ್ದರು.
ಚಂದ್ರ ಆರ್ಯ ದ್ವಾರಾಳು ಗ್ರಾಮದ ಕೆ.ಗೋವಿಂದಯ್ಯ ಮತ್ತು ಜಯಮ್ಮ ದಂಪತಿ ಪುತ್ರ. ರಾಮನಗರ ಗೌಸಿಯಾ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಚಂದ್ರ ಆರ್ಯ ಧಾರವಾಡದಲ್ಲಿ ಎಂಬಿಎ ಶಿಕ್ಷಣ ಪೂರೈಸಿದರು. ಕರ್ನಾಟಕ ರಾಜ್ಯ ಹಣಕಾಸು ನಿಗಮದ (ಕೆಎಸ್‌ಎಫ್‌ಸಿ) ಉಪ ಪ್ರಧಾನ ವ್ಯವಸ್ಥಾಪಕರಾಗಿದ್ದರು. ಬಳಿಕ ಗ್ರಾನೈಟ್ ಉದ್ಯಮದತ್ತ ಆಸಕ್ತಿ ತೋರಿದರು. ದುಬೈನಲ್ಲಿದ್ದ ಅವರು ನಂತರ ಕೆನಡಾಕ್ಕೆ ತೆರಳಿದರು. ಅಲ್ಲಿ ಕಲ್ಲಿದ್ದಲು ಉದ್ಯಮಿಯಾಗಿ ಗುರುತಿಸಿಕೊಂಡರು. 2015ರ ಕೆನಡಾ ಸಂಸತ್ ಚುನಾವಣೆಯಲ್ಲೂ ಅವರು ಆಯ್ಕೆಯಾಗಿದ್ದರು.
PublicNext
20/05/2022 09:16 am