ಹಾವೇರಿ : ಆತ ಬಹುದೊಡ್ಡ ಕನಸನ್ನು ಕಟ್ಟಿಕೊಂಡು ಬಹುದೂರದ ಊರಿಗೆ ಹೋಗಿದ್ದ. ಮಗನ ಬರುವಿಕೆಗಾಗಿ ದಿನ ಎನಿಸುತ್ತಿದ್ದ ಹೆತ್ತವರಿಗೆ ಈಗ ಬರಸಿಡಿಲು ಬಡೆದಂತಾಗಿದೆ.
ಕನಸನ್ನು ಕಟ್ಟಿಕೊಂಡು ಹೋದ ಆ ಯುವಕ ಕನಸಿನಲ್ಲಿಯೇ ಉಳಿಯುವಂತಾಗಿದೆ. ಹಾಗಿದ್ದರೆ ಆಗಿದ್ದಾದರೂ ಏನು ಅಂತೀರಾ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಎಂಬಿಬಿಎಸ್ ವಿದ್ಯಾರ್ಥಿಯ ದಾರುಣ ಸಾವಿನ ಕಥೆ.
ಹೀಗೆ ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತತ್ತರಿಸಿ ಹೋಗಿರುವ ಪಾಲಕರು. ಊರಿನ ಹುಡುಗ ವಿದೇಶದಲ್ಲಿ ಮೃತಪಟ್ಟಿರುವ ಘಟನೆ ಕೇಳಿ ಇಡೀ ಊರಿಗೆ ಊರೇ ಶೋಕಸಾಗರದಲ್ಲಿ ಮುಳುಗಿದೆ.
ರಷ್ಯಾ ಹಾಗೂ ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧದಲ್ಲಿ ಇಂದು ಬೆಳಿಗ್ಗೆ ಸುಮಾರು ಏಳು ಗಂಟೆ ಹೊತ್ತಿಗೆ ನಡೆದ ಶೆಲ್ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಚಳಗೇರಿಯ ನವೀನ ಗ್ಯಾನಗೌಡ್ರ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಇನ್ನು ಕನ್ನಡಿಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯಕ್ಕೆ ರಾಜ್ಯವೇ ಕಂಬನಿ ಮೀಡಿದಿದೆ. ಊರಿನ ಕೀರ್ತಿ ಹೆಚ್ಚಿಸುತ್ತಾನೆ. ನಮ್ಮ ಮಗ ಓದಿ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದುಕೊಂಡಿರುವ ಪಾಲಕರಿಗೆ ಸಾವಿನ ಸುದ್ದಿ ಬರಸಿಡಿಲು ಬಡಿದಂತ್ತಾಗಿದೆ.
ಇನ್ನೂ ನವೀನ್ ಮಾತ್ರವಲ್ಲದೆ ಚಳಗೇರಿಯ ಐದಾರು ಜನ ವಿದ್ಯಾರ್ಥಿಗಳು ಉಕ್ರೇನ್ ಖಾರ್ಕಿವ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು.
ನಾಲ್ಕು ವರ್ಷದ ಹಿಂದೆಯಷ್ಟೆ ನವೀನ್ ಖಾರ್ಕಿವ್ ಗೆ ಹೋಗಿದ್ದ. ಅಲ್ಲದೇ ಇತನ ಹಿಂದೆ ಈ ಊರಿನ ಮೂರ್ನಾಲ್ಕು ವಿದ್ಯಾರ್ಥಿಗಳು ಹೋಗಿದ್ದರು.
ಒಂದೇ ಊರಿನವರಾದ ವಿದ್ಯಾರ್ಥಿಗಳು ಒಂದೇ ಅಪಾರ್ಟ್ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಆದರೆ ಇಂದು ಏಕಾಏಕಿಯಾಗಿ ರಷ್ಯಾದ ಸೇನೆಯು ಕಟ್ಟಡವೊಂದನ್ನು ದ್ವಂಸ ಮಾಡಿದ್ದು,ಕಟ್ಟಡದ ಬಳಿ ಇದ್ದ ನವೀನ್ ಗ್ಯಾನಗೌಡ್ರ ಸಾವನ್ನಪ್ಪಿದ್ದಾನೆ.
ಇನ್ನು ನವೀನ್ ಸಾವಿನ ಬೆನ್ನಲ್ಲೆ ಉಕ್ರೇನ್ ನಲ್ಲಿರುವ ಇತರ ವಿದ್ಯಾರ್ಥಿಗಳ ಪಾಲಕರು ನಮ್ಮ ಮಕ್ಕಳನ್ನು ಕರೆತನ್ನಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಓದಲು ಹೋದ ವಿದ್ಯಾರ್ಥಿ ಹೆಣವಾಗಿ ಊರಿಗೆ ಬರುವಂತಾಗಿದ್ದು, ನಿಜಕ್ಕೂ ದುಃಖದ ಸಂಗತಿ.
-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
PublicNext
01/03/2022 06:22 pm