ಹೊಸದಿಲ್ಲಿ: ಉಕ್ರೇನ್ ನಲ್ಲಿ ರಷ್ಯಾ ಆಕ್ರಮಣ ನೀತಿ ಹೆಚ್ಚಾದ ಬೆನ್ನಲ್ಲೇ ಅಲ್ಲಿರುವ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ಉಕ್ರೇನ್ ತೊರೆಯುವಂತೆ ಸೂಚನೆ ನೀಡಿದೆ. ಸದ್ಯ ಆ ದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದೆ ಹಾಗಾಗಿ ಅಲ್ಲಿ ಉಳಿದುಕೊಳ್ಳುವುದು ಅನಿವಾರ್ಯ ಎಂದಿಲ್ಲವಾದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ದೇಶ ತೊರೆಯುವುದು ಸೂಕ್ತ ಎಂದು ಕ್ಯಿವ್ ನಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿಕೆ ನೀಡಿದೆ.
ಉಕ್ರೇನ್ ಗಡಿ ಭಾಗದೊಳಗೆ ರಷ್ಯಾ ಪಡೆಗಳು ನುಗ್ಗುವ ಸಾಧ್ಯತೆಯ ಭೀತಿ ನಡುವೆ ಭಾರತ ಈ ಸಲಹೆ ನೀಡಿದೆ. ಕಳೆದ ಕೆಲವು ದಿನಗಳಿಂದ ಅನೇಕ ದೇಶಗಳು ತಮ್ಮ ಪ್ರಜೆಗಳಿಗೆ ಉಕ್ರೇನ್ ತೊರೆಯುವಂತೆ ಸಲಹೆ ನೀಡಿವೆ.
ಇನ್ನು ಉಕ್ರೇನ್ ಒಳಗೆ ನುಸುಳುವ ಯಾವುದೇ ಯೋಜನೆ ಇಲ್ಲ ಎಂದು ರಷ್ಯಾ ಹೇಳಿದೆ. ಆದರೆ ಕಳೆದ 48 ಗಂಟೆಗಳಲ್ಲಿ ಬೆಲಾರಸ್, ಕ್ರಿಮಿಯಾ ಮತ್ತು ಪಶ್ಚಿಮ ರಷ್ಯಾ ಪ್ರದೇಶಗಳಲ್ಲಿ ಮಾಸ್ಕೋ ತನ್ನ ಸೇನಾ ಪಡೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದೆ.
ರಷ್ಯಾ ಪಡೆಗಳು ಬೃಹತ್ ಸಂಖ್ಯೆಯಲ್ಲಿ ನೆರೆದಿರುವುದನ್ನು ಈ ಭಾಗದ ಹೊಸ ಉಪಗ್ರಹ ಚಿತ್ರಗಳು ತೋರಿಸಿವೆ. ಯುದ್ಧ ಹೆಲಿಕಾಪ್ಟರ್ಗಳು, ಬಾಂಬ್ ಜೆಟ್ ಗಳನ್ನು ಕೂಡ ರಷ್ಯಾ ಇಲ್ಲಿ ಸೇರಿಸಿದೆ.
PublicNext
15/02/2022 01:42 pm