ನ್ಯೂಯಾರ್ಕ್: ಅಮೆರಿಕ-ಕೆನಡಾ ಗಡಿಯಲ್ಲಿ ಭಾರತದ ಮೂರು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಲ್ವರ ಮೃತದೇಹದ ಗುರುತು ಪತ್ತೆ ಹಚ್ಚಲಾಗಿದ್ದು, ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಗುಜರಾತಿನ ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನ ಡಿಂಗುಚ ಗ್ರಾಮದ ನಿವಾಸಿಗಳು ಎನ್ನುವುದು ತಿಳಿದು ಬಂದಿದೆ.
ಭಾರತದ ಹೈಕಮಿಷನ್ ನೀಡಿರುವ ಹೇಳಿಕೆಯ ಪ್ರಕಾರ, ಡಿಂಗುಚಾ ಗ್ರಾಮದ ಜಗದೀಶ್ ಪಟೇಲ್ (39), ಅವರ ಪತ್ನಿ ವೈಶಾಲಿ ಪಟೇಲ್ (37), ಮಗಳು ವಿಹಂಗಿ ಪಟೇಲ್ (11) ಹಾಗೂ ಧರಂ ಪಟೇಲ್ (3) ಮೃತ ದುರ್ದೈವಿಗಳು.
ಕುಟುಂಬದ ಮುಖ್ಯಸ್ಥ ಜಗದೀಶ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಕಲೋಲ್ ನಗರದ ವಿವಿಧ ಸ್ಥಳಗಳಲ್ಲಿ ವ್ಯಾಪಾರ ಪ್ರಾರಂಭಿಸಿದ್ದರು. ಜಗದೀಶ್ ತಂದೆ ಬಲದೇವ್ ಪಟೇಲ್ ಗ್ರಾಮವನ್ನು ತೊರೆದಿರುವುದರಿಂದ ಆ ಮನೆ ಈಗಲೂ ಮುಚ್ಚಿದೆ. ಸಂದರ್ಶಕರ ವೀಸಾದಡಿ ಜಗದೀಶ್ ಕುಟುಂಬವು ಹದಿನೈದು ದಿನಗಳ ಹಿಂದೆ ಕೆನಡಾಕ್ಕೆ ಪ್ರಯಾಣಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಗದೀಶ್ ಅವರ ಕುಟುಂಬವು 15 ದಿನಗಳ ಹಿಂದೆ ಕೆನಡಾಕ್ಕೆ ತೆರಳಿತ್ತು. ಕಳೆದ 8 ದಿನಗಳಿಂದ ಕುಟುಂಬದೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ ಎಂದು ತಿಳಿಸಲಾಗಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ದುರಂತ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಅಮೆರಿಕ ಪೊಲೀಸ್ ಅಧಿಕಾರಿಗಳು ಮಾನವ ಕಳ್ಳಸಾಗಣೆ ಶಂಕೆ ವ್ಯಕ್ತಪಡಿಸಿದ್ದು, ಫ್ಲೋರಿಡಾ ಮೂಲದ 47 ವರ್ಷದ ಸ್ಟೀವ್ ಶಾಂಡ್ ಎಂಬಾತನನ್ನು ಬಂಧಿಸಿದ್ದಾರೆ.
PublicNext
28/01/2022 11:41 am