ಕಾಬೂಲ್ : ಅಫ್ಘಾನ ವಶಪಡಿಸಿಕೊಂಡ ಬಳಿಕ ತಾಲಿಬಾನ್ ಉಗ್ರರ ಉಪಟಳ ಹೆಚ್ಚಾಗಿದೆ. ಸದ್ಯ ಅಫ್ಘಾನಿಸ್ತಾನದ ಪಂಜ್ ಶೀರ್ ಕಣಿವೆಯಲ್ಲಿ ತಾಲಿಬಾನ್ ಉಗ್ರರು ಮತ್ತು ತಾಲಿಬಾನ್ ಪ್ರತಿರೋಧ ಹೋರಾಟಗಾರರ ನಡುವೆ ಭಾರೀ ಸಂಘರ್ಷ ನಡೆಯುತ್ತಿದೆ.
ಶುಕ್ರವಾರ ತಾಲಿಬಾನ್ ನಡೆಸುತ್ತಿರುವ ಭಾರೀ ದಾಳಿಯನ್ನು ಹಿಮ್ಮೆಟ್ಟಿಸಲು ಹೋರಾಡುತ್ತಿದ್ದೇವೆ ಎಂದು ಪ್ರತಿರೋಧ ಚಳವಳಿಯ ಹೋರಾಟಗಾರರು ಹೇಳಿದ್ದಾರೆ.
ತಾಲಿಬಾನ್ ಹಿಡಿತದಲ್ಲಿಲ್ಲದ ಏಕೈಕ ಪ್ರಾಂತ್ಯ ಪಂಜ್ ಶೀರ್. ಎರಡೂ ಕಡೆಯಿಂದ ನಡೆದ ಶಾಂತಿ ಒಪ್ಪಂದದ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಹೋರಾಟ ನಡೆಯುತ್ತಿವೆ. ಕಳೆದ ತಿಂಗಳು ಮಿಂಚಿನ ಸೇನಾ ಕಾರ್ಯಾಚರಣೆಯಲ್ಲಿ ಅಫ್ಗಾನಿಸ್ತಾನದ ಬಹುತೇಕ ಭಾಗಗಳನ್ನು ವಶಕ್ಕೆ ಪಡೆದ ತಾಲಿಬಾನ್, ತನ್ನ ಹಿಡಿತಕ್ಕೆ ಸಿಗದ ಪಂಜ್ಶೀರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಹರಸಾಹಸಪಡುತ್ತಿದೆ.
ಅಮೆರಿಕವು ಅಫ್ಗಾನಿಸ್ತಾನ ಸರ್ಕಾರಕ್ಕೆ ನೀಡಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮಿಲಿಟರಿ ಸೌಲಭ್ಯ ಮತ್ತು ಜೈಲಿನಿಂದ ಬಿಡುಗಡೆ ಪಡೆದ ಕೈದಿಗಳ ಬಲ ತಾಲಿಬಾನ್ ಗೆ ಇದೆ.
ತಾಲಿಬಾನ್ ವಿರೋಧಿ ಸೇನಾ ಹೋರಾಟಗಾರರು ಮತ್ತು ಮಾಜಿ ಆಫ್ಗಾನ್ ಭದ್ರತಾ ಪಡೆಗಳಿಂದ ಕೂಡಿದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎನ್ ಆರ್ ಎಫ್)ನ ಹೋರಾಟಗಾರರು, ಕಾಬೂಲ್ ನ ಉತ್ತರಕ್ಕೆ 80 ಕಿಲೋಮೀಟರ್ (50 ಮೈಲಿ) ದೂರದಲ್ಲಿರುವ ಕಣಿವೆಯಲ್ಲಿ ಗಮನಾರ್ಹ ಶಸ್ತ್ರಾಸ್ತ್ರ ಸಂಗ್ರಹವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪಂಜ್ ಶೀರ್ ನಲ್ಲಿ ಭಾರೀ ಹೋರಾಟ ನಡೆಯುತ್ತಿದೆ. ಮಸೂದ್ ಕಣಿವೆಯನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ' ಎಂದುಎನ್ ಆರ್ ಎಫ್ ನ ವಕ್ತಾರ ಅಲಿ ಮೈಸಮ್ ನಜಾರಿ ಹೇಳಿದ್ದಾರೆ.
PublicNext
03/09/2021 09:49 pm