ಕಾಬೂಲ್ : ಮಂಗಳವಾರ ಯುಎಸ್ ಸೇನೆ ವಾಪಸ್ ಆಗುವ ಕ್ಷಣವನ್ನು ತಾಲಿಬಾನ್ ಉಗ್ರರು ಗುಂಡು ಹಾರಿಸುವ ಮೂಲಕ ಸಂಭ್ರಮಿಸಿದ್ದಾರೆ. ಅಮೆರಿಕ ಯೋಧರನ್ನೊಳಗೊಂಡ ಐದು ‘ಸಿ-17′ ವಿಮಾನಗಳು ಸೋಮವಾರ ಮಧ್ಯರಾತ್ರಿ ವೇಳೆಗೆ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ಮೂಲಕ 20 ವರ್ಷಗಳ ಬಳಿಕ ಅಮೆರಿಕ ಪಡೆಗಳು ಅಫ್ಘಾನಿಸ್ಥಾನವನ್ನು ಸಂಪೂರ್ಣವಾಗಿ ತೊರೆದಿದೆ.
ಈ ಮೂಲಕ ಅಫ್ಘಾನಿಸ್ತಾನದ ನೆಲದಲ್ಲಿ 20 ವರ್ಷಗಳ ಕಾಲ ನಡೆಸಿದ ಯುದ್ಧ ಕೊನೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ತನ್ನ ಸೇನೆ ಹಿಂತೆಗೆದುಕೊಳ್ಳುವ ಕಾರ್ಯಾಚರಣೆ ಮುಗಿಸಿದೆ. ಶತಕೋಟಿ ಡಾಲರ್ ವೆಚ್ಚದಲ್ಲಿ ದೇಶದ ಪುನರ್ ನಿರ್ಮಾಣ ಕಾರ್ಯ ಆರಂಭಿಸಿದ ಪ್ರಯತ್ನ ತಾಲಿಬಾನ್ ಕಾಲದಲ್ಲಿ ಅಂತ್ಯ ಕಂಡಿದೆ.
ಆಗಸ್ಟ್ 31ರ ಒಳಗೆ ತೆರವು ಕಾರ್ಯಾಚರಣೆ ಪೂರ್ಣಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು. ಅಫ್ಘಾನಿಸ್ತಾನದಿಂದ ಅಮೆರಿಕನ್ನರ ತೆರವುಗೊಳಿಸುವ ಸೇನಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಮೆರಿಕ ಸೇನೆಯ ಜನರಲ್ ಕೆನೆತ್ ಮೆಕೆಂಝಿ ಹೇಳಿದ್ದಾರೆ.
ಯುಎಸ್ ಯೋಧರು ಕಾಬೂಲ್ ವಿಮಾನ ನಿಲ್ದಾಣ ತೊರೆದಿದ್ದಾರೆ. ನಮ್ಮ ದೇಶ ಈಗ ಸಂಪೂರ್ಣ ಸ್ವತಂತ್ರಗೊಂಡಿದೆ’ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆಯನ್ನು ನಾವು ಅಂತ್ಯಗೊಳಿಸಿದ್ದೇವೆ. ಆದರೆ ರಾಜತಾಂತ್ರಿಕತೆ ಮುಂದುವರಿಯಲಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಬಳಸಿದ್ದ ಎಲ್ಲ ಯುದ್ಧೋಪಕರಣಗಳು ಮತ್ತು ವೈಮಾನಿಕ ವಾಹನಗಳನ್ನು ವಾಪಸ್ ಕೊಂಡೊಯ್ಯಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೃಹತ್ ಪ್ರಮಾಣದ ಯುದ್ಧೋಪಕರಣಗಳು ಅಫ್ಘಾನಿಸ್ತಾನದ ತಾಲಿಬಾನಿಯರ ವಶಕ್ಕೆ ಸಿಕ್ಕಿವೆ.
PublicNext
31/08/2021 09:31 am