ಇಸ್ಲಾಮಾಬಾದ್/ಬೀಜಿಂಗ್/ತೆಹರಾನ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಮರಳಿದ ಬಳಿಕ ಲಕ್ಷಾಂತರ ಜನರು ದೇಶ ತೊರೆಯುವ ಸ್ಥಿತಿ ಬಂದೊದಗಿದೆ. ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿರುವುದನ್ನು ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ ತಾಲಿಬಾನ್ ಮರಳುವಿಕೆಯನ್ನು ಅವರು 'ದಾಸ್ಯತ್ವದ ಬಲೆಯಿಂದ ಮುಕ್ತಿ' ಎಂದು ಬಣ್ಣಿಸಿದ್ದಾರೆ. ಇತ್ತ ಚೀನಾ, ಇರಾನ್ ಕೂಡಾ ಇದನ್ನು ಸ್ವಾಗತಿಸಿವೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್, ಈಗ ತಾಲಿಬಾನ್ ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದೆ ಎಂದು ಬಣ್ಣಿಸಿದ್ದಾರೆ.
ಅಫ್ಘಾನಿಸ್ತಾನದ ಬಗ್ಗೆ ಚೀನಾ ಸರ್ಕಾರದ ವಕ್ತಾರರು ಪ್ರತಿಕ್ರಿಯಿಸಿ, ನಾವು ಹೊಸ ಸರ್ಕಾರಕ್ಕೆ ಸಹಕಾರ ನೀಡಲಿದ್ದೇವೆ. ತಾಲಿಬಾನ್ ಜತೆ ಸಹಕಾರ ಹಾಗೂ ಸ್ನೇಹ ಸಂಬಂಧ ಇರಿಸಿಕೊಳ್ಳಲು ನಾವು ಸಿದ್ಧವಾಗಿದ್ದೇವೆ ಎಂದಿದ್ದಾರೆ.
ಅಫ್ಘಾನಿಸ್ತಾನದ ಜತೆ ಚೀನಾ 76 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ಚೀನಾದಲ್ಲಿ ಉಯಿಘರ್ ಮುಸ್ಲಿಮರಿದ್ದಾರೆ. ಈ ಹಿಂದೆ ಉಯಿಘುರ್ ಮುಸ್ಲಿಮವರು ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟು ದಾಳಿ ಮಾಡಿದ ಹಿನ್ನೆಲೆಯಲ್ಲಿ ಇವರನ್ನು ಚೀನಾ ಕಟುವಾಗಿ ನಡೆಸಿಕೊಳ್ಳುತ್ತಿದೆ.
ಶತ್ರುವಿನ ಶತ್ರು ಮಿತ್ರ ಎನ್ನುವ ಮಾತಿನಂತೆ ಈಗ ತಾಲಿಬಾನ್ ಹಾಗೂ ಉಯಿಘರ್ ಮುಸ್ಲಿಮರು ಒಂದಾಗುವ ಸಾಧ್ಯತೆ ಇದೆ. ಇದು ಚೀನಾದ ಆತಂಕ ಹೆಚ್ಚಿಸಿದ್ದು ಈ ಕಾರಣಕ್ಕೆ ತಾಲಿಬಾನ್ ಜೊತೆ ಉತ್ತಮ ಸಂಬಂಧ ಬೆಳೆಸಲು ಮುಂದಾಗಿದೆ.
ಇರಾನ್ ಬೆಂಬಲ:
ಅಮೆರಿಕದ ವಿರುದ್ಧ ಕಿಡಿಕಾರುತ್ತಿರುವ ಇರಾನ್ ಅಫ್ಘಾನಿಸ್ತಾನದಲ್ಲಿ ಸ್ಥಾಪನೆಯಾದ ತಾಲಿಬಾನ್ ಸರ್ಕಾರವನ್ನು ಸ್ವಾಗತಿಸಿದೆ.
PublicNext
17/08/2021 02:00 pm