ಸ್ಯಾನ್ ಡಿಯಾಗೋ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಹೇರಲಾಗಿದ್ದ ಗ್ರೀನ್ ಕಾರ್ಡು ಕಾನೂನಾತ್ಮಕ ವಲಸೆ ನೀತಿ ನಿರ್ಬಂಧವನ್ನು ನೂತನ ಅಧ್ಯಕ್ಷ ಜೊ ಬೈಡನ್ ತೆಗೆದುಹಾಕುವ ಮೂಲಕ ಲಕ್ಷಾಂತರ ಭಾರತೀಯರಿಗೆ ನಿರಾಳತೆ ನೀಡಿದ್ದಾರೆ.
ವಿದೇಶಿಯರಿಗೆ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ನೀಡುವ ನಾಗರಿಕ ಕಾರ್ಡು ಗ್ರೀನ್ ಕಾರ್ಡ್ ಆಗಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ದೇಶ ಆರ್ಥಿಕ ಸಂಕಷ್ಟಕ್ಕೀಡಾಗಿದೆ ಎಂದು ದೇಶದ ಜನರಿಗೆ ಉದ್ಯೋಗ ಮಾರುಕಟ್ಟೆಯನ್ನು ರಕ್ಷಿಸುವ ಹೆಸರಿನಲ್ಲಿ ಕಳೆದ ಡಿಸೆಂಬರ್ ಅಂತ್ಯದವರೆಗೆ ಗ್ರೀನ್ ಕಾರ್ಡುಗಳ ವಿತರಣೆಯನ್ನು ನಿಲ್ಲಿಸಿದ್ದರು. ಈ ಆದೇಶವನ್ನು ಮುಂದಿನ ಮಾರ್ಚ್ ವರೆಗೆ ವಿಸ್ತರಿಸಿ ಡಿಸೆಂಬರ್ 31ರಂದು ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದರು.
ಕೋವಿಡ್-19ನಿಂದ ದೇಶದ ಪರಿಸ್ಥಿತಿ ಕಷ್ಟದಲ್ಲಿರುವಾಗ, ದೇಶದ ಉದ್ಯೋಗ ಮಾರುಕಟ್ಟೆಗೆ ಅಪಾಯವಿದೆ ಎಂದು ವಲಸಿಗರು ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲಾಗಿತ್ತು. ಈ ನಿಟ್ಟಿನಲ್ಲಿ 10014 ಮತ್ತು 10052 ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.
ಆದರೆ ಆ ಆದೇಶಕ್ಕೆ ಇಂದಿನ ಅಧ್ಯಕ್ಷ ಜೊ ಬೈಡನ್ ತಡೆ ನೀಡಿದ್ದಾರೆ.
ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಹಿಂದಿನ ಅಧ್ಯಕ್ಷರ ಆದೇಶವನ್ನು ತೆಗೆದುಹಾಕಿದ್ದಾರೆ. ಆ ಮೂಲಕ ಗ್ರೀನ್ ಕಾರ್ಡ್ ಪಡೆಯಲು ಯತ್ನಿಸುತ್ತಿರುವ ಭಾರತೀಯರು ಸೇರಿದಂತೆ ಲಕ್ಷಾಂತರ ಮಂದಿಗೆ ರಿಲೀಫ್ ಸಿಕ್ಕಿದೆ. ಹೊಸದಾಗಿ ಗ್ರೀನ್ ಕಾರ್ಡ್ ಪಡೆಯಲು ಇನ್ನು ಮುಂದೆ ಅರ್ಜಿ ಸಲ್ಲಿಸಬಹುದಾಗಿದೆ.
PublicNext
25/02/2021 11:59 am