ಉಡುಪಿ : ಭಾರತ ಮೂಲದ ಅನೇಕರು ವಿದೇಶದಲ್ಲಿ ವಾಸವಿದ್ದಾರೆ ಆದ್ರೆ ಅವರಿಂದ ಒಂದಿಲ್ಲೊಂದು ರೀತಿಯಲ್ಲಿ ದೇಶದ ಕೀರ್ತಿ ಹೆಚ್ಚಾಗುತ್ತಿದೆ. ಸದ್ಯ ಮಂಗಳನ ಅಂಗಳದಲ್ಲಿ ನಾಸಾ ನೌಕೆ ಯಶಸ್ಸಿನ ತಂಡಲ್ಲಿ ಭಾರತ ಮೂಲದ ವಿಜ್ಞಾನಿ ಸ್ವಾತಿ ಮೋಹನ್ ಇರುವುದು ದೇಶದ ಹೆಮ್ಮೆ.
ಅದೇ ರೀತಿ ಮೂಲತಃ ಉಡುಪಿ ಜಿಲ್ಲೆ ಪೆರ್ಡೂರು ಗ್ರಾಮದವರಾದ ಶಿಲ್ಪಾ ಹೆಗ್ಡೆ (44) ಆಸ್ಪ್ರೇಲಿಯಾದಲ್ಲಿ ಅಧಿಕಾರದಲ್ಲಿರುವ ಲಿಬರಲ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪೆರ್ಡೂರು ಗ್ರಾಮದ ಮೋಹನ್ ದಾಸ್ ಹೆಗ್ಡೆ ಹಾಗೂ ಶಶಿಕಲಾ ದಂಪತಿ ಪುತ್ರಿ ಶಿಲ್ಪಾ, ನಿಟ್ಟೆಯಲ್ಲಿ ಎಂಜಿನಿಯರಿಂಗ್ ಮಾಡಿ, ಉದ್ಯೋಗಕ್ಕಾಗಿ ಆಸ್ಪ್ರೇಲಿಯಾಕ್ಕೆ ತೆರಳಿದ್ದರು. ಅಲ್ಲಿನ ಡಿಡಬ್ಲುಎಸ್ ಗ್ಲೋಬಲ್ ಕಂಪನಿ ಐಟಿ ಕನ್ಸಲ್ಟೆಂಟ್ ಆಗಿರುವ ಶಿಲ್ಪಾ ಅವರ ಪತಿ ದಯಾನಂದ್ ಶೆಟ್ಟಿ ಕೂಡ ಅಲ್ಲಿಯೇ ಉದ್ಯಮಿಯಾಗಿದ್ದಾರೆ.
2013ರಲ್ಲಿ ನಡೆದ ಫೆಡರಲ್ ಚುನಾವಣೆಯಲ್ಲಿ ಶಿಲ್ಪಾ ಹೆಗ್ಡೆ ಮೆಲ್ಬರ್ನ್ ವಿಲ್ಸಿನಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಇದೀಗ ಅವರನ್ನು ಲಿಬರಲ್ ಪಕ್ಷದ ಉನ್ನತ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. 2022ರಲ್ಲಿ ಆಸ್ಪ್ರೇಲಿಯಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಸಂಬಂಧ ಪಕ್ಷದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಿತಿ ಇದಾಗಿದೆ. ಈ ಸಮಿತಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.
PublicNext
20/02/2021 12:59 pm