ಬೆಂಗಳೂರು:ನಗರದ ಕೋರಮಂಗಲ ವಾರ್ಡ್ ವ್ಯಾಪ್ತಿಯ ಕಸ-ರಸ ಘಟಕದ ಆವರಣದಲ್ಲಿ Regenate pvt. ltd. ಸಂಸ್ಥೆಯು ವಿನೂತನ ಮಾದರಿಯಲ್ಲಿ ತಯಾರಿಸಿರುವ ಹಸಿ ತ್ಯಾಜ್ಯ ಸಂಸ್ಕರಣಾ ಯಂತ್ರವನ್ನು ಸಿಎಸ್‌ಆರ್ ಅನುದಾನದಡಿ ಪಾಲಿಕೆಗೆ ಉಚಿತವಾಗಿ ನೀಡಿದ್ದು, ಮುಖ್ಯ ಆಯುಕ್ತರಾದ ಗೌರವ್ ಗುಪ್ತ ರವರು ಇಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಸಿ ತ್ಯಾಜ್ಯ ಸಂಸ್ಕರಣಾ ಯಂತ್ರವು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ನಗರದಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಿಸುವ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ವಿಕೇಂದ್ರಿಕೃತವಾಗಿ ತ್ಯಾಜ್ಯ ಉತ್ಪಾದನೆಯಾಗುವ ಪ್ರದೇಶದಲ್ಲಿ ಸಂಸ್ಕರಣೆ ಮಾಡುವುದು ಸೂಕ್ತವಾಗಿರುತ್ತದೆ. ಮೂಲದಲ್ಲಿಯೇ ತ್ಯಾಜ್ಯವನ್ನು ಸಂಸ್ಕರಿಸಿದಾಗ ನಗರದಲ್ಲಿ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನು ಸಾಕಷ್ಟು ನಿವಾರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಹಸಿ ತ್ಯಾಜ್ಯ ಸಂಸ್ಕರಣಾ ಯಂತ್ರವನ್ನು ಪ್ರಾಯೋಗಿಕವಾಗಿ ಬಳಸಿ ಅದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಬಳಸಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಸಿ ತ್ಯಾಜ್ಯ ಸಂಸ್ಕರಣಾ ಯಂತ್ರದ ಬಳಕೆಯು ಸುಲಭವಾಗಿದ್ದು, ಹಸಿ ತ್ಯಾಜ್ಯವನ್ನು ಕ್ರಶ್ ಮಾಡಿ ಅದರಿಂದ ಬರುವ ಸ್ಲರಿ(ತ್ಯಾಜ್ಯದಿಂದ ಬರುವ ರಸ)ಯನ್ನು ಸ್ಥಳದಲ್ಲಿರುವ ಬಯೋಗ್ಯಾಸ್ ಗೆ ಬಳಸಿಕೊಳ್ಳಲಾಗುವುದು. ಈ ಯಂತ್ರದ ಕಾರ್ಯವೈಖರಿಯು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದೊಡ್ಡ-ದೊಡ್ಡ ಅಪಾರ್ಟ್ಮೆಂಟ್ಸ್, ಬಲ್ಕ್ ಜೆನರೇಟರ್ಸ್ ಸೇರಿದಂತೆ ಎಲ್ಲಿ ಬಳಸಬಹುದು ಎಂಬುದರ ಬಗ್ಗೆ ಯೋಜನೆ ರೂಪಿಸಿಕೊಳ್ಳಿ. ಜೊತೆಗೆ ಯಂತ್ರದ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುವ ಸಂಬಂಧ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಸಿ ತ್ಯಾಜ್ಯ ಸಂಸ್ಕರಣಾ ಯಂತ್ರದ ಕಾರ್ಯವೈಖರಿ:
ಹಸಿ ತ್ಯಾಜ್ಯ ಸಂಸ್ಕರಣಾ ಯಂತ್ರದ ಅಂದಾಜು ಮೊತ್ತ 15 ಲಕ್ಷ ರೂ. ಗಳಿದ್ದು, ಪ್ರತಿನಿತ್ಯ 500 ಕೆ.ಜಿ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 2 ಹೆಚ್.ಪಿ ಯಂತ್ರದ ಸಹಾಯದೊಂದಿಗೆ 3 ಫೇಸ್ 415 ವೋಲ್ಟ್ಸ್ ವಿದ್ಯುತ್ ಬಳಕೆಯಿಂದ 15 ರಿಂದ 18 ದಿನದೊಳಗಾಗಿ ಗೊಬ್ಬರವಾಗಲಿದೆ. ಈ ಯಂತ್ರದ ತೂಕ 1000 ಕೆ.ಜಿ(1 ಟನ್) ಇದ್ದು, 30 x 35 x 15 ಸ್ಥಳದಲ್ಲಿ ಯಂತ್ರವನ್ನು ಇಡಬಹುದಾಗಿದೆ. ಸಂಪೂರ್ಣ ಜೈವಿಕ ಆಧಾರಿತವಾಗಿ ವಿನ್ಯಾಸಗೊಳಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಈ ಯಂತ್ರವು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲಿದೆ.
PublicNext
27/04/2022 06:16 pm