ಬೆಂಗಳೂರಲ್ಲಿ : ನಗರದಲ್ಲಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ 12 ಕಾರಿಡಾರ್ಗಳನ್ನು 477 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮತ್ತು ನಿರ್ವಹಣೆ ಯೋಜನೆಗಳ ಟೆಂಡರ್ ಪ್ರಕ್ರಿಯೆಯನ್ನು ಏಪ್ರಿಲ್-2021ರೊಳಗೆ ಪೂರ್ಣಗೊಳಿಸಿ, ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ನಡೆದ‘ಬೆಂಗಳೂರು ಮಿಷನ್- 2022 ರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಕಾರಿಡಾರ್‌ಗಳ ಒಟ್ಟು ಉದ್ದ 190 ಕಿ.ಮೀ ಆಗಲಿದೆ. ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಉಳಿದ ಕಾಮಗಾರಿಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ವೇಳೆ ಸುಸ್ಥಿತಿಯಲ್ಲಿರುವ ಪಾದಚಾರಿ ಮಾರ್ಗಗಳನ್ನು ಉಳಿಸಿಕೊಂಡು, ರಸ್ತೆ ಅಭಿವೃದ್ಧಿ ಪಡಿಸಬೇಕು. ಅನಗತ್ಯವಾಗಿ ಹಣ ಪೋಲು ಮಾಡಬೇಡಿ’ ಎಂದೂ ಸಲಹೆ ನೀಡಿದರು.
ಮುಂಬರುವ ಜೂನ್ ಅಂತ್ಯದೊಳಗೆ ನಮ್ಮ ಮೆಟ್ರೊ ಯೋಜನೆಯ ಕೆಂಗೇರಿ ವಿಸ್ತರಿತ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಲಾಗುವುದು. ವೈಟ್‍ಫೀಲ್ಡ್ ಮಾರ್ಗ ಹಾಗೂ ಎಲೆಕ್ಟ್ರಾನಿಕ್ ಸಿಟಿ ಮಾರ್ಗಗಳ ಕಾಮಗಾರಿಗಳನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗೆ ತೊಡಕು ಎದುರಾದರೆ, ಅವುಗಳನ್ನು ನಿವಾರಿಸಲು ಶೀಘ್ರವೇ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.
11 ಕಿ.ಮೀ. ಉದ್ದದ ಕೆ-100 ರಾಜಕಾಲುವೆಯನ್ನು ಅಭಿವೃದ್ಧಿಗೊಳಿಸಲು ಟೆಂಡರ್ ಆಹ್ವಾನಿಸಲಾಗಿದೆ. ರಾಜಕಾಲುವೆಗೆ ತ್ಯಾಜ್ಯ ನೀರು ಸೇರದಂತೆ ತಡೆಯಲಾಗುತ್ತದೆ. 25 ಕೆರೆಗಳ ಅಭಿವೃದ್ಧಿ ಮತ್ತು ಪುನಃಶ್ಚೇತನ ಕಾಮಗಾರಿಯನ್ನು ಕೈಗೊಂಡಿದ್ದು, ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ಬೆಳ್ಳಂದೂರು ಮತ್ತು ವರ್ತೂರು ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ವಿವರಿಸಿದರು.
ನಗರದಲ್ಲಿ ಬೃಹತ್ ವೃಕ್ಷೋದ್ಯಾನಗಳನ್ನು ನಿರ್ಮಿಸಲಾಗುತ್ತಿದೆ. ಏಪ್ರಿಲ್-ಅಂತ್ಯಕ್ಕೆ ತುರಹಳ್ಳಿ (400 ಎಕರೆ), ಮೇ ಅಂತ್ಯಕ್ಕೆ ಕಾಡುಗೋಡಿ (102 ಎಕರೆ) ಮತ್ತು ಜೂನ್ ವೇಳೆಗೆ ಮಾಚೋಹಳ್ಳಿ (98 ಎಕರೆ) ವೃಕ್ಷೋದ್ಯಾನಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.
PublicNext
31/01/2021 09:07 am