ನವದೆಹಲಿ: ಈಗ ಎಲ್ಲೆಲ್ಲೂ 5ಜಿಯದ್ದೇ ಸದ್ದು. ಭಾರತದಲ್ಲಿ 5ಜಿ ಯಾವಾಗ ಬರುತ್ತೆ ಎಂದು ಕುತೂಹಲದಿಂದ ಕಾಯುತ್ತಿದ್ದವರಿಗೆ ಕೊನೆಗೂ ಉತ್ತರ ಸಿಕ್ಕಿದೆ. ಬರುವ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಲಿದ್ದಾರೆ.
ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ), ದೂರಸಂಪರ್ಕ ಇಲಾಖೆ ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾಜಂಟಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 5ಜಿ ಉದ್ಘಾಟನೆ ಮಾಡಲಿದ್ದಾರೆ.
ಆರಂಭದಲ್ಲಿ, ಬೆಂಗಳೂರು ಸೇರಿದಂತೆ ಅಹಮದಾಬಾದ್, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‍ನಗರ, ಕೋಲ್ಕತಾ, ಲಖನೌ, ಮುಂಬೈ ಮತ್ತು ಪುಣೆಯಲ್ಲಿ ಈ ಸೇವೆ ಲಭ್ಯ ಇರಲಿವೆ. ಮುಂದಿನ ವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲೂ 5ಜಿ ದೊರಕಲಿದೆ ಎಂದು ಇಲಾಖೆ ಹೇಳಿದೆ.
2030 ರ ವೇಳೆಗೆ ಭಾರತದಲ್ಲಿ ಒಟ್ಟು ಸಂಪರ್ಕಗಳ ಮೂರನೇ ಒಂದು ಭಾಗಕ್ಕಿಂತಲೂ 5ಜಿ ಸೇವೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತದೆ. 2030ರ ಒಳಗಾಗಿ 6ಜಿ ಸೇವೆ ಆರಂಭವಾಗಲಿದೆ ಎಂದು ಇತ್ತೀಚೆಗಷ್ಟೆ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ರ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಧಾನಿ ಹೇಳಿದ್ದರು. ಅದು ಕೂಡ ಶೀಘ್ರದಲ್ಲಿ ದೇಶಕ್ಕೆ ಆಗಮಿಸುವ ಸಾಧ್ಯತೆ ಇದೆ.
PublicNext
24/09/2022 04:40 pm