ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಪಾಳು ಬಿದ್ದಿದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಯ "ಸ್ಮೃತಿ ಭವನ"

ವಿಶೇಷ ವರದಿ: ರಹೀಂ ಉಜಿರೆ

ಕೋಟ: ನಿನ್ನೆ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಯ ಹೆಸರಲ್ಲಿ ವರ್ಷಂಪ್ರತಿ ಪ್ರಶಸ್ತಿ ನೀಡಲಾಗುತ್ತಿದೆ. ಈ ದಿನವನ್ನು ಹಬ್ಬದಂತೆ ಊರ ಜನ ಆಚರಿಸುತ್ತಾರೆ. ಆದರೆ, ಕಾರಂತಜ್ಜ ವಾಸಕ್ಕಿದ್ದ ಮನೆ "ಸ್ಮೃತಿ ಭವನ" ಈಗ ಪಾಳು ಬೀಳುವ ಹಂತಕ್ಕೆ ತಲುಪಿದೆ !

ಹುಟ್ಟೂರು ಸಾಲಿಗ್ರಾಮ ಪರಿಸರದಲ್ಲಿ ಶಿವರಾಮ ಕಾರಂತರು ಕೊನೆಯ ದಿನಗಳನ್ನು ಕಳೆದಿದ್ದರು. ಬಳಿಕ ಕಾರಂತರ ಮನೆ ಮ್ಯೂಸಿಯಂ ಆಗಿ ಪರಿವರ್ತನೆಯಾಗಿತ್ತು. ಕಾರಂತರ ಸಹಾಯಕಿ ಮಾಲಿನಿ ಮಲ್ಯ ಕಾರಂತರ ನಿಧನ ಬಳಿಕ ಅವರ ಮನೆಯನ್ನು ಕಾರಂತರನ್ನು ಮತ್ತೆ ನೆನಪಿಸುವ ರೀತಿಯಲ್ಲಿ ಸಿದ್ಧಪಡಿಸಿದ್ದರು. ಕಾರಂತರಿಗೆ ಇಷ್ಟದ ಮಕ್ಕಳಿಗಾಗಿ ಇದೇ ಮನೆಯ ಹಿಂಭಾಗದಲ್ಲಿ ಅಂಗನವಾಡಿ ಮತ್ತು ಕರಾಟೆ ತರಗತಿಗಳಿಗೂ ಅವಕಾಶ ಕಲ್ಪಿಸಿದ್ದರು. ಮಕ್ಕಳ ಆಟೋಟಕ್ಕಾಗಿ ವಿಶೇಷ ಆಟಿಕೆಗಳನ್ನು ಸಿದ್ಧಪಡಿಸಿರುವುದಲ್ಲದೆ, ನಿರಂತರ ಕಾರ್ಯಕ್ರಮಗಳನ್ನು ಮಾಲಿನಿ ಮಲ್ಯ ಆಯೋಜಿಸುತ್ತಿದ್ದರು. ಸದ್ಯ ಅವರು ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಕಾರಂತ ಸ್ಮೃತಿ ಭವನವನ್ನು ನೋಡಿಕೊಳ್ಳುತ್ತಿದ್ದ ಮಾಲಿನಿ ಮಲ್ಯ ಅನಾರೋಗ್ಯಗೊಂಡ ಬೆನ್ನಲ್ಲೇ ಸ್ಮೃತಿ ಭವನದ ಬಾಗಿಲು ಮುಚ್ಚಿದೆ. ಸರಿಯಾಗಿ ನೋಡಿಕೊಳ್ಳುವವರು ಇಲ್ಲದ ಹಿನ್ನಲೆಯಲ್ಲಿ ಕಾರಂತರ ನೆನಪಿನ ಭವನ ಸಂಪೂರ್ಣ ಕಸಕಡ್ಡಿ ಜೇಡರ ಬಲೆಯ ತಾಣವಾಗಿ ಮಾರ್ಪಟ್ಟಿದೆ. ತಿಂಗಳುಗಳ ಕಾಲ ವಿದ್ಯುತ್ ಬಿಲ್ ಪಾವತಿಸದೆ ಕರೆಂಟ್ ಕನೆಕ್ಷನ್ ಕೂಡ ಕಟ್ ಆಗಿದೆ. ಕಾರಂತರು ಬಳಸುತ್ತಿದ್ದ ಸಾಮಗ್ರಿಗಳ ರಕ್ಷಣೆಗಾಗಿ ಸ್ಮೃತಿ ಭವನದ ಸುತ್ತ ಸಿಸಿ ಕ್ಯಾಮೆರಾ ಹಾಕಿದ್ದರೂ ಕೂಡ ವಿದ್ಯುತ್ ಇಲ್ಲದ ಕಾರಣ ಬಂದ್ ಆಗಿದೆ.

ಒಟ್ಟಾರೆ, ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೋಟ ಶಿವರಾಮ ಕಾರಂತರ ಅಳಿದುಳಿದ ನೆನಪುಗಳ ರಕ್ಷಣೆಯಾಗಬೇಕು ಎಂಬುದು ಅವರ ಅಭಿಮಾನಿಗಳ ಆಗ್ರಹವಾಗಿದೆ.

Edited By : Somashekar
PublicNext

PublicNext

11/10/2022 06:37 pm

Cinque Terre

34.92 K

Cinque Terre

0