ಬೆಂಗಳೂರು: ರಸ್ತೆ ಗುಂಡಿ ಸಂಬಂಧ ಹೈಕೋರ್ಟ್ ಮುಂದೆ ಹಾಜರಾಗಿದ್ದು, ಗುಂಡಿ ಮುಚ್ಚಿರುವ ಕುರಿತು ಸಂಕ್ಷಿಪ್ತ ದಾಖಲೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್, ನ್ಯಾಯಾಲಯದ ಮುಂದೆ ನಮ್ಮ ಬಳಿ ಇರುವ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ. ಆದರೆ, ಹಲವು ಕಾರಣಗಳಿಂದ ಕಾರ್ಯಾದೇಶ ಮಾಡಲು ಸಾಧ್ಯ ಆಗಿರಲಿಲ್ಲ ಎಂದರು.
ಪೈಥಾನ್ ಸಂಸ್ಥೆ ಜೊತೆ ದರದ ಬಗ್ಗೆ ಮಾತುಕತೆ ನಡೆದಿದೆ. ಹೀಗಾಗಿ ತಡವಾಗಿದೆ. ನಿನ್ನೆ ಪೈಥಾನ್ ಬಳಸಿ ರಸ್ತೆ ಗುಂಡಿ ಮುಚ್ಚುವ ಬಗ್ಗೆ ಕಾರ್ಯಾದೇಶ ಮಾಡಲಾಗಿದೆ. ಲಿಖಿತ ರೂಪದಲ್ಲಿ ಇನ್ನೂ ಹೈಕೋರ್ಟ್ ಗೆ ಮಾಹಿತಿ ಕೊಟ್ಟಿಲ್ಲ ಎಂದು ವಿವರಿಸಿದರು.
10 ದಿನಗಳ ಒಳಗಾಗಿ ಮಾಹಿತಿ ದಾಖಲಾತಿ ಮಾಡಿ ಕೊಡುತ್ತೇವೆ. ಎಲ್ಲ ಮಾಹಿತಿಯನ್ನು ನಾವು ಕಡತ ಮಾಡಿ ತೆಗೆದುಕೊಂಡು ಹೋಗಿದ್ದೆವು. ಆದರೆ, ಪ್ರಕ್ರಿಯೆ ಸರಿ ಇಲ್ಲ ಎಂದು 10 ದಿನಗಳಲ್ಲಿ ಕೊಡಲು ಕೋರ್ಟ್ ಹೇಳಿದೆ. ತ್ವರಿತಗತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ನ್ಯಾಯಾಲಯ ಸೂಚಿಸಿದೆ ಎಂದರು.
* ಹೈಕೋರ್ಟ್ ಛೀಮಾರಿ: ಇಂದು ವಿಚಾರಣೆ ನಡೆಸಿರುವ ಹೈಕೋರ್ಟ್, ರಸ್ತೆ ಗುಂಡಿಗಳನ್ನು ಮುಚ್ಚಲು ಏನಾದರೂ ಕಷ್ಟಗಳಿವೆಯೇ? ರಸ್ತೆ ಗುಂಡಿಗಳಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಬಿಬಿಎಂಪಿ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಪಿಎಂ ಬಂದಾಗ ಮಾಡಿದ ರಸ್ತೆಗಳು ಹಾಳಾಗಿರುವ ವರದಿಗಳಿವೆ ಎಂದು ಆಕ್ಷೇಪಿಸಿತು.
ಹೈಕೋರ್ಟ್ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತರ ಪರ ವಕೀಲರಾದ ಶ್ರೀನಿಧಿ, ಪ್ರಧಾನಿ ಭೇಟಿ ವೇಳೆ ನಿರ್ಮಿಸಿದ್ದ ರಸ್ತೆಗಳು ಹಾಳಾಗಿಲ್ಲ. ಒಳಚರಂಡಿ ಸಮಸ್ಯೆಯಿಂದ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಲಾಗಿದೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದರು.
ಜಂಟಿ ಸಮೀಕ್ಷೆ ಪ್ರಕಾರ, 847.56 ಕಿಮೀ ರಸ್ತೆಯಲ್ಲಿರುವ ಗುಂಡಿಗಳನ್ನು ಸರಿಪಡಿಸಬೇಕಿದೆ. ಈ ಪೈಕಿ 576 ಕಿಮೀ ರಸ್ತೆ ಗುಂಡಿ ಮುಚ್ಚಲು ಟೆಂಡರ್ ಕರೆಯಲಾಗಿದೆ. 397 ಕಿಮೀ ರಸ್ತೆ ಗುಂಡಿ ರಿಪೇರಿಗೆ ಕಾರ್ಯಾದೇಶ ನೀಡಲಾಗಿದೆ. ಜುಲೈ 15ರಂದು ಟೆಂಡರ್ ತೆರೆಯಲಾಗುವುದು ಎಂದು ಉಲ್ಲೇಖಿಸಿದರು.
* ಜು. 27ಕ್ಕೆ ವಿಚಾರಣೆ ಮುಂದೂಡಿಕೆ: ಬೆಂಗಳೂರಿನ ರಸ್ತೆಗಳು ಸರಿಯಾಗುವವರೆಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮುಗಿಸುವುದಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದರು.
PublicNext
30/06/2022 04:02 pm