ಅಥಣಿ: ಹಲವಾರು ವರ್ಷಗಳಿಂದ ಶಿಥಿಲಾವಸ್ಥೆ ತಲುಪಿರುವ ಮೇಲ್ಮಟ್ಟದ ಜಲಸಂಗ್ರಹಾಲಯವನ್ನು ತೆರವುಗೊಳಿಸದೇ ಇರುವುದರಿಂದ ಯಾವುದೇ ಕ್ಷಣದಲ್ಲಾದರೂ ನೆಲಕ್ಕುರುಳುವ ಭೀತಿ ಗ್ರಾಮಸ್ಥರಿಗೆ ಎದುರಾಗಿದೆ.
ಹೌದು ಅಥಣಿ ತಾಲೂಕಿನ ನಾಗನೂರ ಪಿ ಎ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೂಗಳತೆಯ ಅಂತರದಲ್ಲಿರುವ ನೀರಿನ ಟ್ಯಾಂಕ್, ಶಾಲಾ ವಿದ್ಯಾರ್ಥಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಜನಸಾಮಾನ್ಯರಿಗೆ ನೀರು ಪೂರೈಸಲು ಕೋಟ್ಯಂತರ ರೂಪಾಯಿ ಅನುದಾನ ಖರ್ಚು ಮಾಡುತ್ತಿದೆ. ಆದರೆ ಹಳೆಯ ನೀರಿನ ಟ್ಯಾಂಕ್ ಗಳನ್ನು ತೆರವುಗೊಳಿಸುವಲ್ಲಿ ಇಚ್ಛಾಶಕ್ತಿ ತೋರದೇ ಇರುವುದು ರಾಜ್ಯದಲ್ಲಿ ಅನೇಕ ಅವಾಂತರಗಳಿಗೆ ಕಾರಣವಾಗುತ್ತಿದೆ.
ಸುಮಾರು 20ಕ್ಕೂ ಹೆಚ್ಚು ವರ್ಷಗಳ ಹಿಂದೆ ಲೀಲಾವತಿ ಆರ್ ಪ್ರಸಾದ್ ಸಚಿವೆಯಾಗಿದ್ದ ಅವಧಿಯಲ್ಲಿ ನಿರ್ಮಿಸಿರುವ ನಾಗನೂರಿನ ಈ ನೀರಿನ ಟ್ಯಾಂಕ್ ಈಗ ಸಂಪೂರ್ಣವಾಗಿ ಶಿಥಿಲಾವಸ್ಥೆಗೊಂಡು ಆಗಲೋ ಈಗಲೋ ಅಪಾಯಕ್ಕೆ ಆಹ್ವಾನ ನೀಡುವುದಕ್ಕೆ ಸಜ್ಜಾಗಿ ನಿಂತಿದೆ. ಈಗಾಗಲೇ ಇದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ಸಂಬರಗಿ ಗ್ರಾಮ ಪಂಚಾಯತಿಗೆ ಪ್ರಾಥಮಿಕ ಶಾಲೆಯ ವತಿಯಿಂದ ಹಾಗೂ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿಕೊಂಡರು ಇದುವರೆಗೂ ಯಾವುದೇ ಪ್ರಯೋಜನವಾಗದೆ ಇರುವುದು ಗ್ರಾಮ ಪಂಚಾಯತಿಯ ಕುರುಡು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಇದರಿಂದ ದಿನಂಪ್ರತಿ ಅದರ ಪಕ್ಕದಲ್ಲಿ ಓಡಾಡುವ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
PublicNext
26/07/2022 04:38 pm