ಉಳ್ಳಾಲ: 9 ಮಕ್ಕಳಿದ್ದರೂ ಈ 85ರ ವಯೋವೃದ್ಧೆ ಇದೀಗ ಒಂಟಿಯಾಗಿದ್ದಾರೆ! ಮಕ್ಕಳ ಮನೆಯಲ್ಲಿಯೇ ಉಳಿದುಕೊಳ್ಳಲು ಅವಕಾಶ ಕಲ್ಪಿಸುವಂತೆ ತಾಯಿ ಪಾಂಡೇಶ್ವರ ಠಾಣೆ ಹಿರಿಯ ನಾಗರಿಕರ ಸಹಾಯವಾಣಿಯ ಕದ ತಟ್ಟಿದ್ದಾರೆ.
ಸುಬ್ಬಲಕ್ಷ್ಮೀ ಎಂಬವರು ಮಕ್ಕಳೊಂದಿಗೆ ವಾಸಿಸಲು ಹೋರಾಡುತ್ತಿರುವ ಹಿರಿಜೀವ. ಐವರು ಪುತ್ರಿಯರು, ಐವರು ಪುತ್ರರ ಪೈಕಿ ಓರ್ವ ಪುತ್ರ ತೀರಿಕೊಂಡಿದ್ದಾರೆ. ಉಳಿದ ನಾಲ್ವರು ಪುತ್ರರ ಮನೆಯಲ್ಲಿ ಒಂದು ತಿಂಗಳಿನಂತೆ ಉಳಿಯಬೇಕು ಎನ್ನುವ ಆಸೆಯಿದ್ದರೂ ಈವರೆಗೆ ಈಡೇರಿಲ್ಲ. ತೊಕ್ಕೊಟ್ಟು ಕಾಪಿಕಾಡು ನಿವಾಸಿ ಜಗನ್ನಾಥ ಎಂಬ ಪುತ್ರನ ಮನೆಯಲ್ಲಿದ್ದ ಸುಬ್ಬಲಕ್ಷ್ಮೀ ಅವರನ್ನು ಮೂರು ತಿಂಗಳ ಹಿಂದೆ ಪುತ್ರ- ಸೊಸೆ ಸೇರಿಕೊಂಡು ರಿಕ್ಷಾ ಮೂಲಕ ದೂರದ ಸಂಬಂಧಿ ಮನೆಗೆ ಕಳುಹಿಸಿದ್ದರು.
ಅಲ್ಲಿಂದ ಉಳಿದ ಪುತ್ರರು ಕರೆದುಕೊಂಡು ಹೋಗುತ್ತಾರೆಂದು ಹಂಬಲದಲ್ಲಿದ್ದ ಸುಬ್ಬಲಕ್ಷ್ಮೀ ಅವರಿಗೆ ಮೂರು ತಿಂಗಳಾದರೂ ನಿರಾಸೆಯಾಗಿತ್ತು. ವಿವಾಹಿತ ಪುತ್ರಿಯರ ಮನೆಯಲ್ಲಿ ನಿಲ್ಲಲು ಮನ ಮಾಡದೆ, ಪುತ್ರರಿಗೆ ನಿರಂತರ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಇದರಿಂದ ನೊಂದು ನ್ಯಾಯ ದೊರಕಿಸಿ ಕೊಡುವಂತೆ ಹಿರಿಯ ನಾಗರಿಕರ ಸಹಾಯವಾಣಿಯನ್ನು 2 ವಾರಗಳ ಹಿಂದೆ ಸಂಪರ್ಕಿಸಿದ್ದಾರೆ.
ಸುಬ್ಬಲಕ್ಷ್ಮೀ ಅವರ ದೂರಿಗೆ ಸ್ಪಂದಿಸಿದ ಠಾಣೆ ನಿರೀಕ್ಷಕಿ ರೇವತಿ, ಸಹಾಯವಾಣಿ ಸಂಯೋಜಕರ ತಂಡದ ಮೂಲಕ ಪುತ್ರರನ್ನು ಸಂಪರ್ಕಿಸಿ 2 ವಾರದ ಸಮಯಾವಕಾಶ ನೀಡಿದ್ದಾರೆ. ಆದರೆ, ಯಾರೊಬ್ಬರೂ ತಾಯಿಯನ್ನು ಕರೆದೊಯ್ಯುವ ಮನಸ್ಸು ಮಾಡಲೇ ಇಲ್ಲ!
ಈ ಹಿನ್ನೆಲೆಯಲ್ಲಿ ಇಂದು ಸಹಾಯವಾಣಿ ಸಂಯೋಜಕಿ ಎಸ್.ರೇವತಿ , ಕೌನ್ಸಿಲರ್ಸ್ ಮಹಿಮಾ, ರಂಜಿನಿ, ಉಷಾ , ಆಶಿತಾ ಅವರು ಪೊಲೀಸರ ಸಹಕಾರದೊಂದಿಗೆ ಸುಬ್ಬುಲಕ್ಷ್ಮಿ ಅವರನ್ನು ತೊಕ್ಕೊಟ್ಟು ಕಾಪಿಕಾಡು ಬಳಿಯಿರುವ ಜಗನ್ನಾಥ ಅವರ ಮನೆಗೆ ಕರೆತಂದರೂ, ಮನೆಗೆ ಬೀಗ ಹಾಕಿತ್ತು. ದೂರವಾಣಿ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ಸೊಸೆ, ಪೊಲೀಸರು ಹಾಗೂ ಸಹಾಯವಾಣಿ ಸಿಬ್ಬಂದಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ!
ನಾಲ್ವರು 'ಪುತ್ರರತ್ನ' ರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸುವ ತೀರ್ಮಾನಕ್ಕೆ ಈಗ ಬರಲಾಗಿದೆ. ಅಲ್ಲಿಯೂ ಕೇಳದೇ ಇದ್ದಲ್ಲಿ 2006ರ ಆ್ಯಕ್ಟ್ ನಡಿ ದೂರು ದಾಖಲಿಸಿ, ಸಹಾಯಕ ಆಯುಕ್ತರ ನೇತೃತ್ವದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.
PublicNext
05/12/2021 07:52 am