ದಾವಣಗೆರೆ: ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಾಯ್ಸ್ ಟೀಂನ ಅಚ್ಚುಮೆಚ್ಚಿನ ಲಕ್ಕಿ ಎಂಬ ಹೆಸರಿನ ಕುರಿ ಸಾವಿಗೆ ಯುವಕರು ಕಂಬನಿ ಮಿಡಿದಿದ್ದಾರೆ. ಜೊತೆಗೆ ಸಾವಿಗೆ ಕಣ್ಣೀರು ಸುರಿಸಿ ಗೋಳಾಡಿದ ಘಟನೆ ನಡೆದಿದೆ.
ಹೊನ್ನಾಳಿಯ ಜನರ ಅಚ್ಚುಮೆಚ್ಚಿನ ಟಗರು. ಎಲ್ಲರೊಟ್ಟಿಗೆ ಆಡಿ ಬೆಳೆದ ಈ ಕುರಿ ಕಂಡರೆ ಎಲ್ಲರಿಗೂ ಎಲ್ಲಿಲ್ಲದ ಖುಷಿ. ಅಷ್ಟು ಅಚ್ಚುಮೆಚ್ಚಿಗೆ ಪಾತ್ರವಾಗಿತ್ತು. ದುರ್ಗಿಗುಡಿ ಬಾಯ್ಸ್ ಗ್ರೂಪ್‌ನ ಹುಡ್ಡಿ ಕುರಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಇಡೀ ಏರಿಯಾದ ಜನರು ಕಣ್ಣೀರು ಸುರಿಸಿದ ಪ್ರಸಂಗ ನಡೆದಿದೆ.
ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಾಯ್ಸ್ ನ ನೆಚ್ಚಿನ ಕುರಿಗೆ ಲಕ್ಕಿ ಎಂಬ ಹೆಸರಿಟ್ಟಿದ್ದರು. ಇದನ್ನು ಸಾಕಿ ಸಲಹುತ್ತಿದ್ದ ಅಪ್ಪು, ಪಾತು, ಅಣ್ಣಪ್ಪ, ಮಂಜು ಸೇರಿದಂತೆ ಹಲವರು ನೆಚ್ಚಿನ ಕುರಿ "ಲಕ್ಕಿ'' ಕಳೆದುಕೊಂಡು ಕಣ್ಣೀರು ಹಾಕಿದರು. ಕಳೆದ ಮೂರು ವರ್ಷದ ಹಿಂದೆ ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಕೊಟ್ಟು ಕುರಿ ಖರೀದಿ ಮಾಡಿದ್ದ ಯುವಕರು, ಆರು ಹಲ್ಲಿನ ಲಕ್ಕಿ ಕುರಿಯನ್ನು ಸ್ನೇಹಿತನಂತೆ ಸಾಕಿದ್ದರು. ಹುಡ್ಡಿಯಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದ ಈ ಕುರಿ "ಲಕ್ಕಿ'' ಅಂತಾನೇ ರಾಜ್ಯಾದ್ಯಂತ ಹೆಸರು ಮಾಡಿತ್ತು.
ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು ಯುವಕರಿಗೆ ಧೈರ್ಯ ಹೇಳಿ ವೈಯಕ್ತಿಕವಾಗಿ 25 ಸಾವಿರ ಹಣ ನೀಡಿದರಲ್ಲದೇ, ಸಾಂತ್ವನ ಹೇಳಿದರು. ಲಕ್ಕಿ ಹೆಸರಿನ ಕುರಿಯ ಅಂತ್ಯ ಸಂಸ್ಕಾರದ ಮೆರವಣಿಗೆಯಲ್ಲಿ ನೂರಾರು ಅಭಿಮಾನಿಗಳ ಜೊತೆ ಪಾಲ್ಗೊಂಡರು. ಮೂಕ ಪ್ರಾಣಿಗೆ ಗೌರವ ಸಮರ್ಪಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
PublicNext
22/08/2021 01:28 pm