ನವದೆಹಲಿ: ಐವರು ರೋಗಿಗಳ ಬಾಳಿಗೆ ದೇವತೆಯಾದ 20 ತಿಂಗಳ ಪುಟ್ಟ ಕಂದಮ್ಮ ಭಾರತದ ಅತ್ಯಂತ ಕಿರಿಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ನವದೆಹಲಿಯ ರೋಹಿಣಿ ಮೂಲದ ಆಶಿಶ್ ಕುಮಾರ್ ಹಾಗೂ ಬಬಿತಾ ದಂಪತಿಯ ಮಗಳು ಧನಿಷ್ಠಾ 5 ಮಂದಿಯ ಜೀವ ಉಳಿಸಿದ ಪುಟ್ಟ ಕಂದಮ್ಮ. ಧನಿಷ್ಠಾ ಜನವರಿ 8ರಂದು ಆಟವಾಡುತ್ತಿದ್ದಾಗ ಮನೆಯ ಬಾಲ್ಕನಿಯ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಳು. ತಕ್ಷಣವೇ ಅವರನ್ನು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಜನವರಿ 11ರಂದು ಮೃತಪಟ್ಟಿದ್ದಾಳೆ. ಅವಳ ದೇಹದ ಅಂಗಾಂಗಗಳು ಅತ್ಯುತ್ತಮ ಸ್ಥಿತಿಯಲ್ಲಿದ್ದವು. ತಮ್ಮ ಮಗಳನ್ನು ಮತ್ತೆ ಎಂದಿಗೂ ಕಾಣದೇ ಇರುವುದನ್ನು ಮನಗಂಡ ಆಶಿಶ್ ಕುಮಾರ್ ದಂಪತಿ ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.
ಪುಟಾಣಿ ಧನಿಷ್ಠಾಳ ಹೃದಯ, ಲಿವರ್ ಹಾಗೂ ಎರಡೂ ಕಿಡ್ನಿಗಳು ಮುಂತಾದ ದೇಹದ ಮುಖ್ಯವಾದ ಅಂಗಾಂಗಗಳನ್ನು ಪಡೆದ ಆಸ್ಪತ್ರೆ ಸಿಬ್ಬಂದಿ 5 ಮಂದಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜೀವ ಉಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರ್ ಗಂಗಾ ರಾಮ್ ಆಸ್ಪತ್ರೆಯ ಅಧ್ಯಕ್ಷ ಡಿ.ಎಸ್ ರಾಣಾ, ''ಪುಟ್ಟ ಕಂದಮ್ಮನ ಕುಟುಂಬದ ಈ ಉದಾತ್ತ ಕಾರ್ಯವು ನಿಜವಾಗಿಯೂ ಪ್ರಶಂಸನೀಯವಾಗಿದೆ. ಈ ಮಹತ್ತರ ಕಾರ್ಯ ಇತರರನ್ನು ಪ್ರೇರೇಪಿಸಬೇಕು. ನಮ್ಮ ದೇಶದಲ್ಲಿ ಅಂಗಾಂಗ ದಾನ ಮಾಡುವುದು ಅತ್ಯಂತ ವಿರಳ. ಅಂಗಾಂಗಗಳ ಕೊರತೆಯಿಂದ ಪ್ರತಿ ವರ್ಷ ಸರಾಸರಿ ಐದು ಲಕ್ಷ ಭಾರತೀಯರು ಸಾಯುತ್ತಾರೆ'' ಎಂದು ಹೇಳಿದ್ದಾರೆ.
PublicNext
14/01/2021 08:26 pm