ನವಾಡ(ಬಿಹಾರ): ಮದುವೆ ಎಂಬ ಅನುಬಂಧದಲ್ಲಿ ಯಾರ ಋಣ ಎಲ್ಲಿರುತ್ತೋ ಗೊತ್ತೇ ಆಗೋದಿಲ್ಲ. ಕೆಲವರು ಇಷ್ಟಪಟ್ಟು ಮದುವೆ ಆಗುತ್ತಾರೆ. ಇನ್ನೂ ಕೆಲವರು ನಿಶ್ಚಯಿಸಿದಂತೆ ಮದುವೆ ಆಗುತ್ತಾರೆ. ಇನ್ನೂ ಕೆಲವರು ಸಂದರ್ಭದ ಸುಳಿಗೆ ಸಿಕ್ಕು ಸಂಸಾರ ಬಂಧನಕ್ಕೊಳಗಾಗುತ್ತಾರೆ.
ಆದರೆ ಇದು ಅದೆಲ್ಲದಕ್ಕಿಂತ ವಿಭಿನ್ನವಾದ ಕತೆ. ಬಿಹಾರದ ನವಾಡ ಎಂಬಲ್ಲಿ ಈ ಘಟನೆ ನಡೆದಿದೆ. ಹಿರಿಯರು ಇವರಿಬ್ಬರಿಗೆ ಮದುವೆ ನಿಶ್ಚಯಿಸಿದ್ದಾರೆ. ಆದ್ರೆ ಯುವಕ ಇಲ್ಲಸಲ್ಲದ ಸಬೂಬು ಹೇಳುತ್ತ ಮದುವೆ ಮುಂದೂಡುತ್ತ ಬಂದಿದ್ದಾನೆ. ಎಲ್ಲ ಮಾತುಕತೆ ಮುಗಿದ ಮೇಲೂ, ಎರಡೂ ಕಡೆ ಒಪ್ಪಿಗೆ ಆದ ಮೇಲೂ ಯುವಕ ಮದುವೆಯನ್ನು ಪದೇ ಪದೇ ಮುಂದೂಡಿದ್ದಾನೆ. ಸುಮಾರು ತಿಂಗಳುಗಳ ನಂತರ ಯುವತಿ ತನ್ನನ್ನು ಮದುವೆ ಆಗಬೇಕಿದ್ದ ಯುವಕನನ್ನು ಅಚಾನಕ್ಕಾಗಿ ಮಾರುಕಟ್ಟೆ ಪ್ರದೇಶದಲ್ಲಿ ನೋಡಿದ್ದಾಳೆ. ಯುವತಿಯನ್ನು ಕಂಡಿದ್ದೇ ತಡ. ಮದುವೆ ಆಗಬೇಕಾದ ವರ ಅಲ್ಲಿಂದ ಓಟ ಕಿತ್ತಿದ್ದಾನೆ.
ಕೂಡಲೇ ಯುವಕನನ್ನು ಅಟ್ಟಾಡಿಸಿದ ಯುವತಿ ಸ್ಥಳೀಯರ ಸಹಾಯದಿಂದ ಹೇಗೋ ತನ್ನ ಭಾವಿ ಗಂಡನನ್ನು ಹಿಡಿಯುವಲ್ಲಿ ಸಕ್ಸಸ್ ಆಗಿದ್ದಾಳೆ. ಆ ನಂತರ ಇವರ ಹಾದಿ-ಬೀದಿ ಕಿರಿಕ್ ನೋಡಿದ ಜನ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ರಾಜಿ ಪಂಚಾಯ್ತಿ ಮಾಡಿದ ಪೊಲೀಸರು ಹತ್ತಿರದ ದೇವಸ್ಥಾನದಲ್ಲಿ ಈ ಜೋಡಿಯ ಮದುವೆ ಮಾಡಿಸಿ ಕೈ ಬಿಟ್ಟಿದ್ದಾರೆ. ಅಲ್ಲಿಗೆ ಹುಡುಗನನ್ನೇ ಹುಡುಗಿ ಅಟ್ಟಾಡಿಸಿಕೊಂಡು ಹೋದ ಪ್ರಸಂಗ ಸುಖಾಂತ್ಯ ಕಂಡಿದೆ.
PublicNext
30/08/2022 11:12 pm