ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಪತ್ರಿಕೋದ್ಯಮ ಆಗಸದ ರವಿ ಅಸ್ತಂಗತ. ಸಾಹಿತಿ, ಈ ಅಕ್ಷರ ಮಾಂತ್ರಿಕ ಇನ್ನು ನೆನಪು ಮಾತ್ರ. ಪತ್ರಿಕೋದ್ಯಮದಲ್ಲಿ ರವಿ ಇಂದು ಏನನ್ನಾದರೂ ಸಾಧಿಸಿದ್ದರೆ ಅದಕ್ಕೆ ಕಾರಣ ಹುಬ್ಬಳ್ಳಿ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆ ಎಂದರೆ ಅತಿಶಯೋಕ್ತಿಯಾಗದು.
ರವಿ ಉತ್ತಮ ಪತ್ರಕರ್ತ, ಉತ್ತಮ ಬರಹಗಾರರಾಗಿದ್ದರೂ ಬೆಂಗಳೂರಿನಲ್ಲಿ ಯಾವುದೇ ಒಂದು ಘಟಾನುಘಟಿ ಪತ್ರಿಕೆ ಒಳಗೆ ಬಿಟ್ಟುಕೊಂಡಿರಲಿಲ್ಲ. ಆಗ ಕರೆದು ಉದ್ಯೋಗ ಕೊಟ್ಟು ಬರವಣಿಗೆ ಕೃಷಿಗೆ ನೀರೆರಿದ್ದು ಸಂಯುಕ್ತ ಕರ್ನಾಟಕ ಪತ್ರಿಕೆ ಹಾಗೂ ಪತ್ರಿಕಾರಂಗದ ಭೀಷ್ಮರೆಂದೇ ಖ್ಯಾತರಾಗಿದ್ದ ಕೆ. ಶಾಮರಾಯರು.
ಸುಮಾರು ಮೂರು ದಶಕಗಳಿಂದ ನಾನು ಅವರನ್ನು ಬಲ್ಲೆ. 1989 ರಲ್ಲಿ ಹುಬ್ಬಳ್ಳಿ ಸಂಯುಕ್ತ ಕರ್ನಾಟಕ ವರದಿಗಾರನಾಗಿ ಸೇರಿದ್ದಾಗ ರವಿ ಸಾಪ್ತಾಹಿಕ ವಿಭಾಗದ ಮುಖ್ಯಸ್ಥರಾಗಿದ್ದರು. ಅಲ್ಲಿಂದ ಬೆಳೆದ ಒಡನಾಟ ನಮ್ಮನ್ನು ಬೆಂಗಳೂರಿಗೂ ಕರೆದೊಯ್ದಿತು. 1992-93 ರಲ್ಲಿ ಕರ್ಮವೀರ ವಾರಪತ್ರಿಕೆ ಸಾರಥ್ಯವಹಿಸಿದ್ದ ರವಿಗೆ, ಪಾಪಿಗಳ ಲೋಕದಲ್ಲಿ ಅಂಕಣ ಒಂದೆಡೆ ಹೆಸರು ತಂದು ಕೊಟ್ಟರೆ ಇನ್ನೊಂದೆಡೆ ಅನ್ನ ಕಿತ್ತುಕೊಂಡಿತ್ತು.
ಕುಖ್ಯಾತ ರೌಡಿಗಳನ್ನು ವೈಭವೀಕರಿಸುವ ಅಂಕಣ ರವಿಗೆ ಪೊಲೀಸರು ಹಾಗೂ ರೌಡಿ ಶೀಟರ್ ಗಳನ್ನು ಹತ್ತಿರಕ್ಕೆ ತಂದಿತು. ರವಿ ಒಬ್ಬ ಬ್ಲ್ಯಾಕ್ ಮೇಲರ್ ಎಂಬ ಹಣೆಪಟ್ಟಿ ಬಿದ್ದಾಗ ಕೆ. ಶಾಮರಾಯರು 1994 ರಲ್ಲಿ ರವಿಯನ್ನು ಹೊರಗೆ ಅಟ್ಟಿದರು. ಮುಂದೆಯೂ ರವಿ ಈ ಅಪವಾದಗಳಿಂದ ಹೊರಗೆ ಬರಲು ಸಾಧ್ಯವೇ ಆಗಲಿಲ್ಲ.
ಕೈಯಲ್ಲಿ ಸಿಗರೇಟ್, ಸಂಜೆಯಾಗುತ್ತಲೆ ಪರಮಾತ್ಮ ಒಳಗೆ ಇಳಿಯದಿದ್ದರೆ ರವಿಗೆ ದಿನವೇ ಕಳಿಯುತ್ತಿರಲಿಲ್ಲ. ಸಂಯುಕ್ತ ಕರ್ನಾಟಕದಿಂದ ಹೊರಬಿದ್ದಾಗ ಯಾರೊಬ್ಬರೂ ನೆರವಿಗೆ ಬರಲಿಲ್ಲ. ಆಗ ಅನಿವಾರ್ಯವಾಗಿ, ಬೆಂಗಳೂರಿನ ಜಿಂದಾಲ್ ನಿಸರ್ಗ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದ ಪತ್ರಿಕೆಯೊಂದಕ್ಕೆ ಸೇರಿಕೊಂಡರು.
ಅಲ್ಲಿಯೇ ಊಟ ವಸತಿ ಸೌಲಭ್ಯವಿದ್ದರೂ ಸಿಗರೇಟ್ ಮಧ್ಯದ ಹೆಸರನ್ನೂ ಎತ್ತುವಂತಿರಲಿಲ್ಲ. ಆಗ ರವಿಯ ಪರಿಸ್ಥಿತಿ ನೀರಿನಿಂದ ಹೊರಬಿದ್ದ ಮೀನಿನಂತಾಗಿತ್ತು. ಕೇವಲ ಒಂದು ವಾರ ಕಳೆಯುವುದರಲ್ಲಿ ರವಿ ಸುಸ್ತಾಗಿ ಹೋಗಿದ್ದರು. ಒಂದು ಬೆಳಗಿನ ಜಾವ ಭದ್ರತಾ ಸಿಬ್ಬಂದಿಗೆ ಚಳ್ಳೆಹಣ್ನು ತಿನ್ನಿಸಿ ಅಲ್ಲಿಂದ ಪರಾರಿಯಾಗಿ ಮತ್ತೇ ಬಂದದ್ದು ಬೆಂಗಳೂರಿಗೆ. ಆಗ ರವಿ ಸಂಪೂರ್ಣ ಕಂಗಾಗಲಾಗಿದ್ದರು. ಒಂದು ಕಪ್ ಕಾಫ,ಒಂದು ಸಿಗರೇಟಿಗೂ ತತ್ವಾರ.
ಆ ಸಮಯದಲ್ಲಿ ರವಿ ಪಟ್ಟ ನೋವು ಯಾವ ವೈರಿಗೂ ಬೇಡವಾಗಿತ್ತು. ನಂತರ ಅವರಿವರ ಸಹಾಯದಿಂದ 1995 ರಲ್ಲಿ ಹಾಯ್ ಬೆಂಗಳೂರು ವಾರ ಪತ್ರಿಕಾ ಆರಂಭಿಸಿದಾಗ ಟೀಕಿಸಿದವರೆ ಹೆಚ್ಚು. ಆದರೆ ಹಾಯ್ ಬೆಂಗಳೂರಿನಲ್ಲಿಯ ಪ್ರತಿಯೊಂದು ವರದಿಗೂ ರವಿ ತಮ್ಮ ಸ್ಪರ್ಷ ನೀಡ ತೊಡಗಿದಾಗ ಅದರ ಖದರೇ ಬದಲಾಯಿತು, ರಾಜಕಾರಣಿಗಳ ಜಾತಕ ಜಾಲಾಡಿಸುವುದು ಭ್ರಷ್ಟ ಅಧಿಕಾರಿಗಳ ಬೆಂಡೆತ್ತುವ ರವಿಯ ಸ್ಟೈಲೇ ವಿಭಿನ್ನವಾಗಿತ್ತು. ಹೀಗಾಗಿ ಕೆಲವೇ ತಿಂಗಳಲ್ಲಿ ಹಾಯ್ ಬೆಂಗಳೂರು ಕರ್ನಾಟಕ ಮೂಲೆ ಮೂಲೆಗೂ ತಲುಪುವಂತಾಯಿತು.
ಹಾಯ್ ಯಾವ ಮಟ್ಟ ತಲುಪಿತೆಂದರೆ ವಿಶೇಷವಾಗಿ ಉತ್ತರ ಕರ್ನಾಟಕ ಯುವ ಪೀಳಿಗೆಯ ಮನೆ ಮಾತಾಗಿತ್ತು. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬಂತೆ ರವಿ ತಮ್ಮ ಬರವಣಿಗೆಯಿಂದ ಸ್ನೇಹಿತರಿಗಿಂತ ಶತೃಗಳನ್ನೇ ಹೆಚ್ಚು ಸೃಷ್ಠಿಸಿಕೊಂಡಿದ್ದರು. ಅದರಿಂದ ಕೋರ್ಟು ಕಚೇರಿ ಅಲೆಯುವುದು ಸಾಮಾನ್ಯವಾಗಿತ್ತು.
ರವಿ ಉತ್ತಮ ವಾಗ್ಞಿಮಿಯೂ ಆಗಿದ್ದರು.ಹುಬ್ಬಳ್ಳಿಯ ಸ್ವಯಂ ಸೇವಾ ಸಂಸ್ಥೆಯೊಂದರ ಪತ್ರಿಕಾಗೋಷ್ಠಿಯಲ್ಲಿ ರವಿ ಆಡಿ ಮಾತುಗಳಿಂದ ಪ್ರಭಾವಿತರಾಗಿ ಸಂಘಟಕರು ರವಿಯನ್ನೇ ಮುಖ್ಯ ಭಾಷಣಕಾರರನ್ನಾಗಿ ಅಹ್ವಾನಿಸಿದ್ದರು ಇದಕ್ಕೆ ಉದಾಹರಣೆ.
ರವಿ ಅನುಭವಿಸಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನದ ಒಂದು ಪಾತ್ರವಾಗಿರುತ್ತಿದ್ದರು. ಕಾರ್ಗಿಲ್ ಯುದ್ಧ, ಗುಜರಾತ್ ಭೀಕರ ಭೂಕಂಪ, ಅಫ್ಗಾನಿಸ್ತಾನದ ಯುದ್ಧ ಭೂಮಿ, ಅರುಣಾಚಲ ಪ್ರದೇಶದ ಒಂದು ಪಯಣ ಹಾಗೂ ಈಚಿನ ಪುಲ್ವಾಮಾ ದಾಳಿಯ ವರದಿಗಳು ಒಂದು ಕ್ಷಣ ನಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತವೆ. ಇದು ರವಿಯ ಬರವಣಿಗೆ ವಿಶೇಷತೆ.
ಖಾಸಗಿ ಚಾನಲ್ ಗಾಗಿ ನಡೆಸಿಕೊಡುತ್ತಿದ್ದ ಕ್ರೈಂ ಡೈರಿ, ಆಕಾಶವಾಣಿಗಾಗಿ ಬೆಳ್ ಬೆಳಗ್ಗೆ ಬೆಳಗೆರೆ ಕಾರ್ಯಕ್ರಮ, ಕನ್ನಡ ಚಿತ್ರರಂಗದ ಐದು ದಶಕಗಳನ್ನು ಮೆಲಕು ಹಾಕುವ "ಎಂದೂ ಮರೆಯದ ಹಾಡು'' ಜನಪ್ರಿಯತೆ ತಂದುಕೊಟ್ಟಿತ್ತು.
ವಾರಸ್ದಾರ, ಮಾದೇಶ, ಗಂಡ- ಹೆಂಡತಿ ಸೇರಿದಂತೆ ಕನ್ನಡದ ಕೆಲ ಚಲನಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು. ಹಾಯ್ ಬೆಂಗಳೂರ್ ಹೆಸರಿನಲ್ಲಿ ಸಿನಿಮಾವೊಂದು ಬಂದಿತ್ತು. ಯೂಟೂಬ್ ಚಾನಲ್ ಮೂಲಕ ಓದಗರನ್ನು ತಲುಪಿಸಲು ಯತ್ನಿಸಿದ್ದ ರವಿ, ಅನೇಕ ವಿವಾದಾತ್ಮಕ ವಿಷಯಗಳಿಂದಾಗಿ ವೃತ್ತಿಬಾಂಧವರಿಂದಲೇ ಪ್ರತಿರೋಧ ಎದುರಿಸಬೇಕಾಗಿತ್ತು.
ಬಹುಮುಖ ಪ್ರತಿಭೆಯ ಹಿರಿಯ ಪತ್ರಕರ್ತನನ್ನು ಕಳೆದುಕೊಂಡು ಪತ್ರಿಕೋದ್ಯಮ ಇಂದು ಬಡವಾಗಿದೆ. ವೈಯಕ್ತಿಕ ಅವಸವ್ಯಗಳ ನಡುವೆಯೂ ಬೆಳೆದು ನಿಂತಿದ್ದ ಧೀಮಂತನಿಗೊಂಡು ನುಡಿ ನಮನ.
PublicNext
13/11/2020 08:55 pm