ಚಿಕ್ಕೋಡಿ: ಸಾಮಾನ್ಯವಾಗಿ ಬಂಡಿಗಳಿಗೆ ಎತ್ತು, ಕೋಣಗಳನ್ನು ಹೂಡಿ ಗಾಡಿ ಓಡಿಸುವುದನ್ನು ನೋಡಿದ್ದೀರಿ. ಆದರೆ ಇಲ್ಲೊಬ್ಬ ರೈತ ತನ್ನ ಬಂಡಿಗೆ ಹೋತಗಳನ್ನು ಕಟ್ಟಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟಕ್ಕೂ ಆ ರೈತ ಯಾರು ಅಂತೀರಾ? ಹಾಗಾದರೆ ಈ ಸ್ಟೋರಿ ನೋಡಿ.
ಒಂದಕ್ಕಿಂತ ಒಂದು ಜಬರ್ದಸ್ತಾಗಿ ಬೆಳೆದು ನಿಂತಿರುವ ಹೋತಗಳು. ಇವುಗಳನ್ನೇ ಎತ್ತುಗಳಂತೆ ಗಾಡಿಗೆ ಕಟ್ಟಿ ಕೃಷಿ ಕಾಯಕದಲ್ಲಿ ತೊಡಗಿರುವ ರೈತ.
ಚಿಕ್ಕೋಡಿ ಪಟ್ಟಣದ ಅಪ್ಪಾಸಾಹೇಬ ಚನ್ನವರ ಅನ್ನುವ ರೈತ ಕಳೆದ ಹಲವು ದಿನಗಳಿಂದ ತಮ್ಮ ಬಂಡಿಗೆ ಹೋತಗಳನ್ನು ಹೂಡಿ ಕೃಷಿ ಕಾಯಕದಲ್ಲಿ ತೋಡಗಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಎತ್ತು, ಕೋಣಗಳನ್ನು ಬಂಡಿಗೆ ಹೂಡುವುದನ್ನು ನೋಡಿದ್ದೇವೆ. ಆದರೆ ಹೋತಗಳನ್ನು ಬಳಸುವುದನ್ನು ಎಲ್ಲಿಯೂ ನೋಡಿಲ್ಲ. ಆದರೆ ಅಪ್ಪಾಸಾಹೇಬ ತಾವು ಸಾಕಿದ ಹೋತಗಳನ್ನು ಬಂಡಿಗೆ ಹೂಡಿ ವಿಶೇಷತೆಯನ್ನು ಮೆರೆದಿದ್ದಾರೆ.
ಅಪ್ಪಾಸಾಹೇಬ ಚನ್ನವರ ಅವರಿಗೆ ಪ್ರಾಣಿಗಳನ್ನು ಸಾಕುವುದು ಅಂದರೆ ಎಲ್ಲಿಲ್ಲದ ಪ್ರೀತಿ. ಈ ಹಿನ್ನೆಲೆಯಲ್ಲಿ ಕಳೆದ 2-3 ವರ್ಷಗಳಿಂದ ಅವರು ಈ ಹೋತಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದಾರೆ.
ಅತ್ಯಂತ ಬಲಿಷ್ಠವಾಗಿ ಬೆಳೆದ ಈ ಹೋತಗಳನ್ನು ಕೊಂಡುಕೊಳ್ಳಲು ಸಾಕಷ್ಟು ಜನರು ಬಂದರು. ಆದರೆ ಅವನ್ನು ಮಾರಲು ಅಪ್ಪಾಸಾಹೇಬ ನಿರಾಕರಿಸಿದ್ದಾರೆ.
ಅದರ ಬದಲಾಗಿ ಅವುಗಳನ್ನು ಬಂಡಿಗೆ ಹೂಡಿ ಮೇವು ತರಲು, ಮಕ್ಕಳನ್ನು, ಮನೆಯವರನ್ನು ಸಮೀಪದ ಸ್ಥಳಗಳಿಗೆ ಒಯ್ಯಲು ಉಪಯೋಗಿಸಿಕೊಳ್ಳುತ್ತಿದ್ದಾರೆ.
ಈ ರೈತ ಪ್ರತಿ ದಿನ ಹೋತಗಳನ್ನು ಹೂಡಿಕೊಂಡು ಸುಮಾರು 4-5 ಕಿ.ಮೀ ಸಂಚರಿಸುತ್ತಾರೆ. ಹಾಲಟ್ಟಿ ಲಕ್ಷ್ಮಿ ದೇವಸ್ಥಾನ, ಘಟಗಿ ಬಸವೇಶ್ವರ ದೇವಸ್ಥಾನಗಳಿಗೆ ಮನೆ ಮಂದಿಯನ್ನೆಲ್ಲಾ ಈ ಬಂಡಿಯಲ್ಲೇ ಕರೆದೊಯ್ದಿದ್ದಾರೆ. ಹೋತ ಮಾತ್ರವಲ್ಲದೆ ಇವರು ದನಕರುಗಳನ್ನೂ ಸಾಕಿದ್ದಾರೆ. ಎತ್ತು, ಎಮ್ಮೆ, ಹಸು, ಆಡು ಹೀಗೆ ಹಲವು ಪ್ರಾಣಿಗಳನ್ನು ಸಾಕುತ್ತಿದಾರೆ. ನಮ್ಮಪ್ಪ ಅಪ್ಪಾಸಾಹೇಬ ಅವರಿಗೆ ಮೊದಲಿನಿಂದಲೂ ಜಾನುವಾರುಗಳನ್ನು ಸಾಕುವುದು ಹವ್ಯಾಸ. ಅದಕ್ಕೆ ನಾವು ಕೂಡಾ ಸಾಥ್ ನೀಡುತ್ತಿದ್ದೇವೆ ಅನ್ನುತ್ತಾರೆ ಅವರ ಮಗ ಅನೀಲ.
ಒಟ್ಟಿನಲ್ಲಿ ಬಂಡಿಗೆ ಎತ್ತುಗಳ ಬದಲು ಹೋತಗಳನ್ನು ಹೂಡುವುದರ ಮೂಲಕ ರೈತ ಅಪ್ಪಾಸಾಹೇಬ ಎಲ್ಲರ ಹುಬ್ಬೇರುವಂತೆ ಮಾಡಿರುವುದಂತೂ ಸತ್ಯ.
PublicNext
03/09/2021 09:36 am