ಹಿರಿಯೂರು : ಮಧ್ಯಕರ್ನಾಟಕದ ಬಯಲುಸೀಮೆ ಎಂದು ಪ್ರಸಿದ್ಧಿ ಪಡೆದಿರುವ ಕೋಟೆ ನಾಡಿನಲ್ಲಿ ಸಾಮಾನ್ಯವಾಗಿ ರಾಗಿ, ಮೆಕ್ಕೆಜೋಳ, ಶೇಂಗಾ, ಈರುಳ್ಳಿ, ಸೂರ್ಯಕಾಂತಿ, ಈ ತರಹದ ಬೆಳೆಗಳನ್ನು ಅಷ್ಟೇ ಬೆಳೆಯುವುದು ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಕದ ಜಿಲ್ಲೆಯಿಂದ ಬಂದ ರೈತನೊಬ್ಬ ಮಲೆನಾಡಿನಲ್ಲಿ ಬೆಳೆಯಬಹುದಾದ ಶುಂಠಿಯನ್ನು ಬಯಲುಸೀಮೆಯಲ್ಲೂ ಕೂಡ ಶುಂಠಿ ಬೆಳೆದು ಲಕ್ಷಾಂತರ ರುಪಾಯಿ ಲಾಭಗಳಿಸುವಬಹುದು ಎಂಬ ನಿರೀಕ್ಷೆಯಲ್ಲಿದ್ದು, ಇತರೆ ರೈತರಿಗೆ ಮಾದರಿಯಾಗಿದ್ದಾನೆ. ಹಾಗಾದರೆ ಆ ರೈತ ಯಾರು, ಶುಂಠಿ ಬೆಳೆಯುತ್ತಿರುವುದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.....
ಕೇರಳದ ಎರ್ನಾಕುಲಂನ ಸಿ.ಪಿ. ಜಾರ್ಜ್ ಅವರು 1973 ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಕಳೆದ ಐದು ವರ್ಷಗಳ ಹಿಂದೆಯಷ್ಟೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿಗೆ ಬಂದು ಸುಮಾರು 80 ಎಕರೆ ಜಮೀನು ಖರೀದಿಸಿ "ಜಾರ್ಜ್ ಎಸ್ಟೇಟ್" ಆಗಿ ಮಾಡಿಕೊಂಡು ಕೇರಳದ ತೋಟಗಾರಿಕೆ ಬೆಳೆಗಳ ಪ್ರಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ ಯಾರೂ ಸಹ ಶುಂಠಿ ಬೆಳೆದಿಲ್ಲ. ನಾವು ಏಕೆ ಇಲ್ಲೊಮ್ಮೆ ಶುಂಠಿ ಬೆಳೆಯಬಾರದು ಎಂಬ ಹಂಬಲವಿತ್ತು. ಆಗಾಗಿ ಜಾರ್ಜ್ ಅವರು ಸಿಜು ಎಂಬುವವರಿಗೆ ಮೇಟಿಕುರ್ಕೆ ಸಮೀಪ ಇರುವ 12 ಎಕರೆ ಭೂಮಿಯನ್ನು ಉಚಿತವಾಗಿ ಗುತ್ತಿಗೆ ನೀಡಿದ್ದು, ಗುತ್ತಿಗೆ ಪಡೆದ ಜಮೀನಿನಲ್ಲಿ ಸಿಜು ಮೂರು ತಿಂಗಳ ಹಿಂದೆ ಶುಂಠಿ ನಾಟಿ ಮಾಡಿದ್ದಾರೆ. ಹೊಸ ಪ್ರಯೋಗದ ಬಗ್ಗೆ ಮಾಹಿತಿ ಪಡೆಯಲು ಸ್ಥಳಕ್ಕೆ ಭೇಟಿ ನೀಡಿದ್ದ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಜೊತೆ ಸ್ವವಿವರವಾಗಿ ವಿಷಯ ಹಂಚಿಕೊಂಡರು.
‘ನಾವು ಏಳು ಜನ ಪಾಲುದಾರರಿದ್ದು, ಎನ್.ಆರ್.ಪುರದಲ್ಲಿ ಶುಂಠಿ, ಸುವರ್ಣಗೆಡ್ಡೆ, ಅರಿಶಿಣ, ಕಾಳುಮೆಣಸು ಒಳಗೊಂಡಂತೆ ಮಲೆನಾಡಿನ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಹಿರಿಯೂರು ತಾಲ್ಲೂಕಿನಲ್ಲಿ ನಾವು ಏಕೆ ಶುಂಠಿಯನ್ನು ಬೆಳೆಯಬಾರದು ಎಂಬ ಯೋಚನೆ ಬಂತು. ಸ್ಥಳೀಯರು ಇಲ್ಲಿನ ವಾತಾವರಣಕ್ಕೆ ಶುಂಠಿ ಬರುವುದಿಲ್ಲ, ಸುಮ್ಮನೆ ನಷ್ಟ ಮಾಡಿಕೊಳ್ಳುತ್ತೀರಿ, ಎಂದು ಸಲಹೆ ಹೇಳಿದ್ದರು. ಉಷ್ಣಾಂಶ 35 ಡಿಗ್ರಿಗಿಂತ ಹೆಚ್ಚಿದ್ದರೆ ಶುಂಠಿ ಬರುವುದಿಲ್ಲ. ಇಲ್ಲಿ ಅದಕ್ಕಿಂತ ಹೆಚ್ಚು ಉಷ್ಣಾಂಶ ಇರುವುದಿಲ್ಲ. ಜೊತೆಗೆ ಕಪ್ಪು ಭೂಮಿಯಲ್ಲಿ ಉತ್ಕೃಷ್ಟವಾಗಿ ಬರಬಹುದು ಎಂದು ಶುಂಠಿ ಬೆಳೆಯಲು ನಾವು ಮುಂದಾದೆವು’ ಎಂದರು. ಇದೀಗ ಬೆಳೆ ಉತ್ತಮ ಇಳುವರಿ ಬರುತ್ತಿರುವ ಕಾರಣ ಶುಂಠಿಯಲ್ಲಿ ಲಕ್ಷ ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾನೆ ರೈತ.
PublicNext
01/09/2021 01:35 pm