ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದ ಪಿಚ್ ಅನ್ನು ಮಳೆಯಿಂದಾಗಿ ಮುಚ್ಚಲಾಗಿದ್ದು, ಬಹು ನಿರೀಕ್ಷಿತ ಭಾರತ ಎ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಿನ ಟೆಸ್ಟ್ ಪಂದ್ಯಕ್ಕೆ ಶನಿವಾರ ಮತ್ತೆ ಮಳೆ ಅಡ್ಡಿಯಾಗಿದೆ.
ಶುಕ್ರವಾರ ತಡರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದು, ಬೆಳಿಗ್ಗೆ 10 ಗಂಟೆ ತನಕ ತುಂತುರು ಮಳೆ ಮುಂದುವರಿದಿತ್ತು. ಕ್ರೀಡಾಂಗಣ ಸಾಕಷ್ಟು ಹಸಿಯಾಗಿದೆ. ಅದನ್ನು ಒಣಗಿಸಲು ಕ್ರೀಡಾಂಗಣದ ಸಿಬ್ಬಂದಿ ಸಾಕಷ್ಟು ಶ್ರಮಿಸುತ್ತಿದ್ದಾರೆ.
ಸತತ ಮಳೆ ಹಾಗೂ ಮೈದಾನದಲ್ಲಿ ತೇವಾಂಶ ಹಿಡಿತಕ್ಕೆ ಬಾರದ ಕಾರಣ ಬಹುತೇಕ ಊಟದ ವಿರಾಮದ ತನಕ ಪಂದ್ಯ ನಡೆಯುವುದು ಅನುಮಾನವಾಗಿತ್ತು. ಈಗ ಆಟ ನಡೆಯುವುದೇ ದೊಡ್ಡ ಅನುಮಾನವಾಗಿದೆ. ಬೆಳಿಗ್ಗೆ ಎಂದಿನಂತೆ ಭಾರತ ತಂಡದ ಆಟಗಾರರು ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ ಆಟವಾಡಲು ಪರಿಸ್ಥಿತಿ ಅನುಕೂಲವಿಲ್ಲದ್ದರಿಂದ ಹಾಗೂ ಮಧ್ಯಾಹ್ನ ತನಕ ಆಟ ನಡೆಯುವುದು ಸಾಧ್ಯವಿಲ್ಲದ ಕಾರಣ ಆಟಗಾರರು ಹೋಟೆಲ್‌ಗೆ ಮರಳಿದರು. ಮಳೆಯ ಕಾರಣಕ್ಕೆ ಆಟ ಆರಂಭವಾಗುವ ಅನುಮಾನದಿಂದ ಕಿವೀಸ್ ತಂಡದ ಆಟಗಾರರು ಬೆಳಿಗ್ಗೆ ಕ್ರೀಡಾಂಗಣಕ್ಕೆ ಬರದೇ ಹೋಟೆಲ್‌ನಲ್ಲೇ ಉಳಿದಿದ್ದು ಟಿವಿ ವಾಚ್ ಮಾಡುತ್ತಾ ಆಟಗಾರರು ವೇಳೆ ಕಳೆಯುತಿದ್ದಾರೆ.
ಮೈದಾನದಲ್ಲಿನ ತೇವಾಂಶ ಆರದ ಕಾರಣ ನಾಲ್ಕು ದಿನಗಳ ಈ ಪಂದ್ಯದ ಮೊದಲ ದಿನದಾಟವೂ ಬಲಿಯಾಗಿತ್ತು. ಎರಡನೇ ದಿನ ಪಂದ್ಯ ಆರಂಭಗೊಂಡರೂ, ಆಗಾಗ ಮಳೆ ಕಾಡಿದ್ದರಿಂದ 66 ಓವರ್‌ಗಳಷ್ಟೇ ಪಂದ್ಯ ನಡೆದಿತ್ತು. ಟಾಸ್ ಸೋತು ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್ ಅಂತ್ಯಕ್ಕೆ 6ವಿಕೆಟ್ ಕಳೆದುಕೊಂಡು 229 ರನ್ ಗಳಿಸಿ ಆಡುತ್ತಿದೆ. ವಿಕೆಟ್ ಕೀಪರ್ ಕೆ.ಎಸ್.ಭರತ್(74) ಹಾಗೂ ರಾಹುಲ್ ಚಾಹರ್ (4) ಕ್ರೀಸ್‌ನಲ್ಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/09/2022 07:28 am