ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿಂದು ನಡೆಯಬೇಕಿದ್ದ ಭಾರತ-ಎ ಹಾಗೂ ನ್ಯೂಜಿಲೆಂಡ್-ಎ ತಂಡಗಳ ನಡುವಣ ನಾಲ್ಕು ದಿನಗಳ ಕ್ರಿಕೆಟ್ ಪಂದ್ಯ ನಾಳೆಗೆ ಮುಂದೂಡಿಕೆಯಾಗಿದೆ.
ಹೌದು... ಮೈದಾನದಲ್ಲಿ ತೇವಾಂಶ ಹೆಚ್ಚಿದ್ದ ಕಾರಣ ಬೆಳಿಗ್ಗೆ 9-30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಸುಮಾರು ಕಾಲ ವಿಳಂಬವಾಗಿತ್ತು. ಈ ನಡುವೆ ಮಧ್ಯಾಹ್ನದ ವರೆಗೂ ಕೂಡ ತೇವಾಂಶ ಹಿಡಿತಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪಂದ್ಯ ನಾಳೆಗೆ ಮುಂದೂಡಲ್ಪಟ್ಟಿದೆ.
ಬುಧವಾರ ರಾತ್ರಿ ಹಾಗೂ ಗುರುವಾರ ನಸುಕಿನಲ್ಲಿ ಸ್ವಲ್ಪ ಮಳೆಯಾಗಿದ್ದು, ಕ್ರೀಡಾಂಗಣ ತೇವಗೊಂಡಿದೆ. ಕ್ರೀಡಾಂಗಣದ ಹಲವು ಸಿಬ್ಬಂದಿ ತೇವಾಂಶ ಹೊರಹಾಕಲು ಶ್ರಮಿಸುತ್ತಿದ್ದಾರೆ. ಅಪರೂಪಕ್ಕೆ ನಡೆಯುವ ಇಂಥ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಕ್ರೀಡಾಂಗಣದಲ್ಲಿ ನೆರೆದಿದ್ದು, ಪಂದ್ಯದ ಆರಂಭಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಆಗೀಗ ಕ್ರೀಡಾಂಗಣಕ್ಕೆ ಬರುವ ನ್ಯೂಜಿಲೆಂಡ್ ಹಾಗೂ ಭಾರತ ತಂಡದ ಆಟಗಾರರನ್ನು ಕಂಡು ಕೂಗಿ, ಕೈಬೀಸಿ ಸಂಭ್ರಮಿಸಿದ ದೃಶ್ಯ ಕಂಡುಬಂತು.
ಮೂರು ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಸಲು ಬಿಸಿಸಿಐ ಅವಕಾಶ ನೀಡಿದ್ದು ಸಾಕಷ್ಟು ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ, ತೇವಾಂಶ ಹಾಗೂ ಮೇಲಿಂದ ಮೇಲೆ ತುಂತುರು ಮಳೆಯಿಂದ ಪಂದ್ಯ ನಾಳೆಗೆ ಮುಂದೂಡಿಕೆಯಾಗಿದೆ. ಕ್ರಿಕೆಟ್ ಪಂದ್ಯಾವಳಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನೋಂದಾಯಿತ ಅಕಾಡೆಮಿಯ ಕ್ರಿಕೆಟ್ ಕಲಿಕಾ ಆಟಗಾರರು ಒಳಗೊಂಡಂತೆ ಸುಮಾರು 2 ಸಾವಿರ ಜನರಿಗೆ ಉಚಿತ ಪ್ರವೇಶ ನೀಡಲಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/09/2022 06:38 pm