ಧಾರವಾಡ: ಕಳೆದ ಎರಡು ವರ್ಷಗಳಿಂದ ಇಡೀ ಮಾನವ ಕುಲ ಕೊರೊನಾ ವೈರಾಣುವಿನಿಂದ ತತ್ತರಿಸಿದೆ. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರೀಡೆ, ದೈಹಿಕ ಚಟುವಟಿಕೆಗಳು ಅಗತ್ಯ. ಪೊಲೀಸರು ತಮ್ಮ ಒತ್ತಡಗಳನ್ನು ನಿರ್ವಹಿಸಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಉಮೇಶ ಎಂ ಅಡಿಗ ಹೇಳಿದರು.
ಧಾರವಾಡದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಹಾಗೂ ಬಲೂನುಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪೊಲೀಸರ ಶಿಸ್ತಿನ ಕ್ರೀಡಾಕೂಟ ಆಯೋಜನೆ ಸಂತಸ ತಂದಿದೆ. ಪೊಲೀಸರು, ಸೈನಿಕರು ಶಿಸ್ತು, ಸಂಯಮಕ್ಕೆ ಹೆಸರಾಗಿದ್ದಾರೆ. ಮಾನಸಿಕ, ದೈಹಿಕ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ. ಸೋಲು, ಗೆಲುವುಗಳನ್ನು ಸಮ ಮನಸ್ಕರಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಸೋಲಿನ ಕಾರಣಗಳ ಅವಲೋಕನ ಮಾಡಿಕೊಳ್ಳಬೇಕು. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಜಗತ್ತು ತತ್ತರಿಸಿದೆ. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರೀಡೆ ಅಗತ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರು ಕ್ರೀಡಾಕೂಟ ಉದ್ಘಾಟನೆಯನ್ನು ಘೋಷಿಸಿದರು.
ನಂತರ ಆಕರ್ಷಕ ಪಥಸಂಚಲನ ಜರುಗಿತು.
ಭದ್ರಾ, ತುಂಗಾ, ವರದಾ, ಕೃಷ್ಣಾ ಹಾಗೂ ಕಾವೇರಿ ತಂಡಗಳಲ್ಲಿ 250 ಕ್ಕಿಂತ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ನಾಳೆ ಜ.04 ರಂದು ಸಂಜೆ 4.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಸತೀಶಕುಮಾರ್ ಬಹುಮಾನ ವಿತರಣೆ ಮಾಡಲಿದ್ದಾರೆ.
Kshetra Samachara
03/01/2022 09:11 am