ಕುಂದಗೋಳ: ಹಳ್ಳಿ ಹೆಣ್ಣುಮಕ್ಕಳಿಗೂ ರಕ್ಷಣಾತ್ಮಕ ತಂತ್ರ ಗೊತ್ತಿರಬೇಕು, ಬಾಲಕರು ಸಹ ಪ್ಯಾಟೆ ಮಕ್ಕಳಂತೆ ಎಲ್ಲ ಚಟುವಟಿಕೆಗಳಲ್ಲಿ ಮುಂದಿರಬೇಕು ಎಂಬ ಅಭಿಲಾಷೆ ಹೊತ್ತ ನಿವೃತ್ತ ಸೈನಿಕರೊಬ್ಬರು ಉಚಿತವಾಗಿ ಎಲ್ಲ ಮಕ್ಕಳಿಗೆ ಕರಾಟೆ ಹೇಳಿ ಕೊಡ್ತಾ ಇದ್ದಾರೆ.
ಆರ್ಮಡ್ ಕೋರ್ ಟ್ಯಾಂಕ್ ಪಡೆಯ ನಿವೃತ್ತ ಯೋಧ ಹಾಲಿ ಆರ್.ಎಮ್.ಎಸ್.ಎ ಶಾಲೆಯ ದೈಹಿಕ ಶಿಕ್ಷಕ ಡಾ.ನಾಗರಾಜ ಗವಳಿ ಇಂತಹದ್ದೊಂದು ಕಾರ್ಯಕ್ಕೆ ಮುಂದಾಗಿ ಆಧುನಿಕ ಜಗತ್ತಿನಲ್ಲಿ ಹಳ್ಳಿ ಹೆಣ್ಣು ಮಕ್ಕಳು ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಬಾಲಕರು ಸಿಟಿ ಮಕ್ಕಳಿಗೆ ಪೈಪೋಟಿ ನೀಡಬೇಕೆಂಬ ಉದ್ದೇಶದಿಂದ ಸ್ವ ಇಚ್ಛೆಯಿಂದ 5 ರಿಂದ 10ನೇ ತರಗತಿ ಮಕ್ಕಳಿಗೆ ಕರಾಟೆ ತರಬೇತಿ ಹೇಳಿ ಕೊಡುತ್ತಿದ್ದಾರೆ.
ಈವರೆಗೆ 1200 ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿದ ಯೋಧ ನಾಗರಾಜ್ ಗವಳಿ ಕುಂದಗೋಳ ತಾಲೂಕಿನ 2000 ಮಕ್ಕಳಿಗೆ ಮುಂದಿನ ದಿನಗಳಲ್ಲಿ ಕರಾಟೆ ನೀಡುವ ಆಲೋಚನೆ ಹೊಂದಿದ್ದು, ಅದಕ್ಕಾಗಿ 12 ಜನ ನುರಿತ ರಾಷ್ಟ್ರೀಯ ಅಂತಾರಾಷ್ಟ್ರೀಯ ಕರಾಟೆ ಪಟುಗಳನ್ನು ಸ್ವತಃ ಆಮಂತ್ರಿಸಿ ಸರ್ಕಾರಿ ಶಾಲೆ ಮಕ್ಕಳಿಗೆ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಕರಾಟೆ ಕೌಶಲ್ಯ ನೀಡುತ್ತಿದ್ದಾರೆ.
ಸದ್ಯ ನಿವೃತ್ತ ಯೋಧನ ಸೇವೆಗೆ ಶಾಲಾ ಮಕ್ಕಳ ಪಾಲಕರು ಸಹ ಖುಷ್ ಆಗಿದ್ದು, ದೇಶ ಸೇವೆ ಮುಗಿಸಿ ಶಾಲೆಯಲ್ಲಿ ಶಿಕ್ಷಣ ಸೇವೆ ನೀಡಿ, ಇದೀಗ ಕರಾಟೆ ತರಬೇತಿ ನೀಡುತ್ತಿರುವ ಯೋಧನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Kshetra Samachara
04/10/2022 07:08 pm