ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ವಿಜ್ಞಾನ ಬೆಳೆದಂತೆಲ್ಲ ಹೊಸ ಹೊಸ ಆವಿಷ್ಕಾರಗಳು ಕೂಡ ನಡೆಯುತ್ತಿವೆ. ಇದು ವಿಜ್ಞಾನದ ಯುಗ. ಹೀಗಾಗಿ ಯಾವ ಕೆಲಸ ಮಾಡಿದರೂ ಅದಕ್ಕೆ ವಿಜ್ಞಾನ ಸ್ಪರ್ಶ ನೀಡುತ್ತಲೇ ಇದೆ. ಧಾರವಾಡದ ಹಿರಿಮೆಯಾಗಿರುವ ಐಐಐಟಿ (ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ)ಯು ಇಂತಹ ಆವಿಷ್ಕಾರಗಳತ್ತ ದಾಪುಗಾಲು ಇಡುತ್ತಿದೆ.
ಹೀಗೆ ಶೇಕ್ ಹ್ಯಾಂಡ್ ಕೊಟ್ಟು ತನ್ನ ಪರಿಚಯ ಮಾಡಿಕೊಳ್ಳುತ್ತಿರುವ ರೋಬೋಟ್.. ಇಂಗ್ಲಿಷ್‌ನಲ್ಲೇ ಎಲ್ಲಾ ಮಾಹಿತಿ ನೀಡುತ್ತಿರುವ ಈ ರೋಬೋಟ್‌ನ್ನು ವಯೋವೃದ್ಧರ ಸೇವೆಗಾಗಿ ರೆಡಿ ಮಾಡುವ ಕನಸನ್ನು ಐಐಐಟಿ ಹೊಂದಿದೆ. ಅದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ.
ಧಾರವಾಡ ತಾಲೂಕಿನ ತಡಸಿನಕೊಪ್ಪ ಗ್ರಾಮದ ಬಳಿ ನಿರ್ಮಾಣವಾಗಿರುವ ವಿಶಾಲವಾದ ಐಐಐಟಿ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಅಷ್ಟರಲ್ಲಾಗಲೇ ವೃದ್ಧರ ಸೇವೆ ಮಾಡಲು ನೂತನ ರೋಬೋಟ್‌ವೊಂದನ್ನು ತಯಾರು ಮಾಡುವ ಗುರಿಯನ್ನು ಈ ಕೇಂದ್ರ ಹೊಂದಿದೆ. ಇದಕ್ಕಾಗಿ ಪ್ರೊಫೆಸರ್‌ಗಳು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ.
ನ್ಯಾಷನಲ್ ಮಿಷನ್ ಆನ್ ಸೈಬರ್ ಫಿಸಿಕಲ್ ಸಿಸ್ಟಮ್ ಅಡಿ ಈ ರೋಬೋಟ್ ಆವಿಷ್ಕಾರ ಮಾಡಲಾಗುತ್ತಿದೆ. ಸದ್ಯ ಈ ರೋಬೋಟ್‌ನ್ನು ಬೆಂಗಳೂರಿನ ಇನ್ವೆಂಟೊ ರೋಬೋಟಿಕ್ಸ್‌ನಿಂದ ಖರೀದಿ ಮಾಡಲಾಗಿದೆ. ವಯಸ್ಸಾದವರ ಸೇವೆ ಮಾಡಲು, ಹಿಂದಿ ಭಾಷೆ ಅರ್ಥೈಸಿಕೊಳ್ಳುವ ಹಾಗೂ ವಯೋವೃದ್ಧರ ಇತರ ಸೇವೆಗಳಿಗೆ ಅಣಿಯಾಗುವಂತೆ ಮಾಡುವ ಪ್ರೋಗ್ರಾಂಗಳನ್ನು ಇದರಲ್ಲಿ ಹಾಕಬೇಕಿದ್ದು, ಅದಕ್ಕಾಗಿ ಮೂರು ವರ್ಷ ಸಮಯ ತೆಗೆದುಕೊಳ್ಳಲಿದೆ. ಈ ರೋಬೋಟ್ ಹೇಗೆಲ್ಲ ಕೆಲಸ ಮಾಡಬಹುದು ಎಂಬುದರ ಬಗ್ಗೆ ಇನ್ವೆಸ್ಟಿಗೇಟರ್ ಪ್ರಿನ್ಸಿಪಾಲ್ ಡಾ.ದೀಪಕ್ ಅವರು ವಿವರಿಸಿದ್ದಾರೆ.
ಏನೇ ಆಗಲಿ ಧಾರವಾಡದ ಐಐಐಟಿಯ ನೂತನ ಕಟ್ಟಡ ಉದ್ಘಾಟನೆಗೂ ಮುನ್ನವೇ ಇಂತದೊಂದು ಆವಿಷ್ಕಾರಕ್ಕೆ ಮುಂದಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಐಐಐಟಿ ಪ್ರಾಧ್ಯಾಪಕರ ಈ ಕನಸು ಕೈಗೂಡಿ ವಯೋವೃದ್ಧರ ಸೇವೆಗೆ ರೋಬೋಟ್ ಮುಂದಾಗಲಿ ಎಂಬುದೇ ನಮ್ಮ ಹಾರೈಕೆ.
Kshetra Samachara
11/11/2021 11:15 am