ಚಿತ್ರದುರ್ಗದ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ 70 ಶಾಸಕರು, 45 ಜನ ವಿಧಾನ ಪರಿಷತ್ ಸದಸ್ಯರು ಬರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದ ಅನುದಾನ ಸಾಕಾಗುತ್ತಿಲ್ಲ. ಹೀಗಾಗಿ ಈ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ನಿಯೋಗವನ್ನು ತೆಗೆದುಕೊಂಡು ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ 500 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಮನವಿ ಮಾಡಲಿದ್ದೇವೆ ಎಂದು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಬರುವ ನಾಲ್ಕು ಶಾಸಕರ ಕ್ಷೇತ್ರದಲ್ಲಿ ನಮ್ಮ ಮಂಡಳಿಯಿಂದಾದ ಕಾಮಗಾರಿಗಳ ಬಗ್ಗೆಯೂ ಈಗಾಗಲೇ ಪರಿಶೀಲನೆ ನಡೆಸಿದ್ದೇನೆ. 2022-23ರಲ್ಲಿ ನಮ್ಮ ಮಂಡಳಿಗೆ 45 ಕೋಟಿ ಅನುದಾನ ಮೀಸಲಿಡಲಾಗಿತ್ತು. ನಮ್ಮ ಮಂಡಳಿ ವ್ಯಾಪ್ತಿಗೆ 70 ಶಾಸಕರು, 14 ಎಂಎಲ್‌ಸಿಗಳು ಬರುವುದರಿಂದ ಈ ಅನುದಾನ ಸಾಕಾಗುವುದಿಲ್ಲ ಎಂದು ಈ ಹಿಂದಿನ ಅಧ್ಯಕ್ಷರೂ ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ 54 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿತ್ತು. ಈಗಾಗಲೇ ಈ ಸಂಬಂಧ 99 ಕೋಟಿಯ ಕ್ರಿಯಾ ಯೋಜನೆ ಸಿದ್ಧಪಡಿಸಿ 971 ಕಾಮಗಾರಿ ಕೈಗೊಂಡಿದ್ದೇವೆ. ಅದರಲ್ಲಿ ಶೇ.50 ರಷ್ಟು ಕೆಲಸಗಳು ಪೂರ್ಣಗೊಂಡಿವೆ ಎಂದರು.
ನಮ್ಮ ಮಂಡಳಿಯಲ್ಲಿ ಅನುದಾನದ ಕೊರತೆ ಇದೆ. ಮೊನ್ನೆ ಶಾಸಕರಾದ ಗೂಳಿಹಟ್ಟಿ ಶೇಖರ ಅವರು ನಮ್ಮ ಕಚೇರಿಗೆ ಭೇಟಿ ನೀಡಿದ್ದರು. ಅನುದಾನದ ಕೊರತೆ ಇರುವುದರಿಂದ ಮಂಡಳಿ ವ್ಯಾಪ್ತಿಗೆ ಬರುವ ಎಲ್ಲ ಶಾಸಕರು, ಎಂಎಲ್‌ಸಿಗಳ ನಿಯೋಗ ತೆಗೆದುಕೊಂಡು ಹೋಗಿ ಸಿಎಂ ಅವರಿಗೆ ಭೇಟಿಯಾಗಿ 500 ಕೋಟಿ ಹೆಚ್ಚುವರಿ ಅನುದಾನ ಕೇಳೋಣ ಎಂದಿದ್ದಾರೆ. ಶೀಘ್ರವೇ ನಾವು ನಿಯೋಗ ತೆಗೆದುಕೊಂಡು ಹೋಗಲಿದ್ದೇವೆ ಎಂದರು.
ಮಾರ್ಚ 31ರೊಳಗಾಗಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ನಮ್ಮ ಮಂಡಳಿ ವ್ಯಾಪ್ತಿಯಲ್ಲಿ ಕೃಷಿ ಆಧಾರಿತ ಕೆಲಸಗಳು ಬಹಳಷ್ಟಾಗುತ್ತವೆ. ನಮ್ಮ ವ್ಯಾಪ್ತಿಗೆ ಬರುವ ಶಾಸಕರ ಕ್ಷೇತ್ರದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಎಲ್ಲ ಕಾಮಗಾರಿಗಳನ್ನು ನಡೆಸಲು ಅವಕಾಶವಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/09/2022 08:24 pm