ಹುಬ್ಬಳ್ಳಿ: ಬಹಳ ವರ್ಷಗಳ ನಂತರ ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ದೇಶದ ರಾಷ್ಟ್ರಪತಿಯವರು ಆಗಮಿಸಿರುವುದು ಸಂತಸ ತಂದಿದೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ಇತಿಹಾಸ ಐದನೇ ಶತಮಾನದಿಂದ ಪ್ರಾರಂಭವಾಗುತ್ತದೆ. ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಅರಸರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತ್ತು. ಸ್ವಾತಂತ್ರ್ಯ ಚಳುವಳಿಗೂ ಈ ಜಿಲ್ಲೆ ಗಮನಾರ್ಹ ಕೊಡುಗೆ ನೀಡಿದೆ. ಸಂಗೀತ, ಸಾಹಿತ್ಯಕ್ಕೆ ಈ ಭಾಗದ ಕೊಡುಗೆ ಮಹತ್ವದ್ದು, ಭಾರತರತ್ನ ಪಂಡಿತ ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನಸೂರ ಮತ್ತಿತರ ಮೇಧಾವಿ ಸಂಗೀತಗಾರರು ಇಲ್ಲಿಂದ ಹೊರಹೊಮ್ಮಿದ್ದಾರೆ.
ಕನ್ನಡಕ್ಕೆ ಬಂದಿರುವ ಎಂಟು ಜ್ಞಾನಪೀಠಗ ಪ್ರಶಸ್ತಿಗಳಲ್ಲಿ ಜಿಲ್ಲೆ ಬಹುಪಾಲು ಹೊಂದಿದೆ. ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ದ್ರೌಪದಿ ಮುರ್ಮು ಅವರು, ಗ್ರಾಮ ಪಂಚಾಯತಿ ಸದಸ್ಯರಾಗಿ, ಉತ್ತಮ ಶಾಸಕರಾಗಿ, ಸಚಿವರಾಗಿ, ರಾಜ್ಯಪಾಲರಾಗಿ ಇದೀಗ ರಾಷ್ಟ್ರಪತಿಯಾಗಿ ಉನ್ನತ ಹುದ್ದೆಗೆ ಏರಿದ್ದರೂ ಕೂಡ ಸರಳ ನಡೆ, ನುಡಿಗೆ ಹೆಸರಾಗಿದ್ದಾರೆ. ಶೈಕ್ಷಣಿಕ ಕೇಂದ್ರವಾಗಿರುವ ಧಾರವಾಡ ಜಿಲ್ಲೆಗೆ ಐಐಐಟಿ ಉದ್ಘಾಟಿಸಲು ಆಗಮಿಸಿರುವುದು ಹೆಮ್ಮೆಯ ಸಂದರ್ಭವಾಗಿದೆ ಎಂದರು.
Kshetra Samachara
26/09/2022 03:47 pm