ಹುಬ್ಬಳ್ಳಿ: ಅವರೆಲ್ಲ ಮಹಾನಗರ ಪಾಲಿಕೆಯ ನೌಕರರು. ಪ್ರತಿನಿತ್ಯ ಜನರಿಗೆ ಸರ್ಕಾರದ ಸೇವೆ ಒದಗಿಸುವ ಕೆಲಸ ಮಾಡುತ್ತಿರುವ ಇವರಿಗೆ ಸರ್ಕಾರ ಇದೀಗ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಸವರಿದೆ. ಹೀಗಾಗಿ ಆ ನೌಕರರೆಲ್ಲ ಸರ್ಕಾರದ ವಿರುದ್ಧವೇ ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹೌದು... ಹೀಗೆ ಪಾಲಿಕೆ ಮುಂದೆ ಕುಳಿತು ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ನೌಕರರು, ತಮ್ಮ ಕರ್ತವ್ಯ ಬದಿಗಿಟ್ಟು ಬೀದಿಗಿಳಿದು ಪ್ರತಿಭಟನೆಗೆ ಇಳಿದಿದ್ದಾರೆ. ರಾಜ್ಯ ಸರ್ಕಾರ, ಸರ್ಕಾರಿ ನೌಕರರು ಹಾಗೂ ಮತ್ತವರ ಕುಟುಂಬದ ಸದಸ್ಯರಿಗೆ ಅನುಕೂಲವಾಗಲೆಂದು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಿ ಆದೇಶಿಸಿದೆ. ಆದ್ರೆ, ಈ ಯೋಜನೆಯಲ್ಲಿ ಮಹಾನಗರ ಪಾಲಿಕೆ ಹಾಗೂ ನಗರ, ಸ್ಥಳೀಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಕೈ ಬಿಟ್ಟಿದ್ದರಿಂದ ಸದ್ಯ ಪಾಲಿಕೆ ನೌಕರರು ಬೀದಿಗಿಳಿದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರು ಹಾಗೂ ಪೌರಕಾರ್ಮಿಕರು, ಪ್ರತಿನಿತ್ಯ ಸಾರ್ವಜನಿಕರೊಟ್ಟಿಗೆ ಒಡನಾಟ ಹೊಂದಿದ್ದಾರೆ. ಕೆಲಸದ ಒತ್ತಡದಿಂದ ಅನೇಕರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಆದ ಕಾರಣ, ಆರೋಗ್ಯ ಸಂಜೀವಿನಿ ಯೋಜನೆಯನ್ನು ಪಾಲಿಕೆ ಅಧಿಕಾರಿಗಳಿಗೂ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಸಾರ್ವಜನಿಕ ಸೇವೆ ಒದಗಿಸುವ ಸರ್ಕಾರಿ ನೌಕರರಿಗೆ, ಸರ್ಕಾರ ಈ ರೀತಿ ಮಲತಾಯಿ ಧೋರಣೆ ತೋರುತ್ತಿರೋದು ಒಂದೆಡೆಯಾದ್ರೆ, ಇನ್ನು ಸರ್ಕಾರವನ್ನೇ ನಂಬಿ ಕುಳಿತಿರುವ ಜನಸಾಮಾನ್ಯರ ಹಿತದೃಷ್ಠಿ ಕಾಪಾಡೋರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಸರ್ಕಾರ ಇನ್ನಾದ್ರೂ ತಾರತಮ್ಯ ಕೈಬಿಟ್ಟು ಸರ್ಕಾರಿ ನೌಕರರ ಹಿತ ಕಾಪಾಡಬೇಕಿದೆ.
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
14/09/2022 05:19 pm