ಧಾರವಾಡ: ಈ ಬಾರಿ ಶತಾಯ ಗತಾಯ ಅಧಿಕಾರದ ಗದ್ದುಗೆ ಏರಲೇಬೇಕು ಎಂದು ಕಾಂಗ್ರೆಸ್ ಪಕ್ಷ ಎಲ್ಲಾ ಪ್ರಯತ್ನ, ಪ್ರತಿಜ್ಞೆಗಳನ್ನು ಮಾಡುತ್ತಿದೆ. ಅದಕ್ಕಾಗಿ ಎಲ್ಲಾ ನಾಯಕರು ಸಮಾವೇಶ, ಚರ್ಚೆಗಳನ್ನು ಮಾಡುತ್ತಿದ್ದಾರೆ. ಇಂತಹ ಮತ್ತೊಂದು ಸಮಾವೇಶಕ್ಕೆ ಧಾರವಾಡ ನಗರ ಸಾಕ್ಷಿಯಾಗಿದೆ.
ಹೌದು! ಧಾರವಾಡದ ಆದಿತ್ಯ ಮಯೂರ್ ಹೋಟೆಲ್ ನಲ್ಲಿ ಕಾಂಗ್ರೆಸ್ ನವ ಸಂಕಲ್ಪ ಚಿಂತನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಬೆಳಗಾವಿ, ಧಾರವಾಡದ ಹಾಲಿ ಹಾಗೂ ಮಾಜಿ ಶಾಸಕರು ಪಾಲ್ಗೊಂಡು ಗಮನಸೆಳೆದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ಶ್ರೀನಿವಾಸ ಮಾನೆ, ಶಿವಲೀಲಾ ಕುಲಕರ್ಣಿ, ಮಾಜಿ ಶಾಸಕ ಸಂತೋಷ ಲಾಡ್, ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ, ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಪಾಲಿಕೆ ಸದಸ್ಯ ಡಾ.ಮಯೂರ್ ಮೋರೆ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಕಲಘಟಗಿ ಕಾಂಗ್ರೆಸ್ ಟಿಕೆಟ್ ಗಾಗಿ ತೀವ್ರ ಪೈಪೋಟಿ ನೀಡುತ್ತಿರುವ ನಾಗರಾಜ ಛಬ್ಬಿ ಅವರನ್ನು ಸ್ವತಃ ಸಂತೋಷ ಲಾಡ್ ಅವರೇ ಕೈ ಹಿಡಿದುಕೊಂಡು ವೇದಿಕೆ ಮೇಲೆ ಕರೆದುಕೊಂಡು ಹೋಗುವ ಮೂಲಕ ಗಮನಸೆಳೆದರು. ಅಲ್ಲದೆ ತಮ್ಮ ಅನ್ಯೋನ್ಯತೆಯನ್ನು ಪ್ರದರ್ಶಿಸಿದರು. ಈ ನಡವಳಿಕೆ ತೀವ್ರ ಕುತೂಹಲವನ್ನೂ ಉಂಟು ಮಾಡಿತು.
ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಸಕ್ತ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಭೆಯಲ್ಲಿ ತೀರ್ಮಾನಿಸಿ, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಮುಖಂಡರಿಗೆ ಸ್ಪಷ್ಟ ಸಂದೇಶ ರವಾನಿಸಿತು.
Kshetra Samachara
25/07/2022 10:17 am