ಧಾರವಾಡ: ಪೊಲೀಸರ ಮಾತಿಗೆ ಮನ್ನಣೆ ಕೊಟ್ಟು ಅವರು ಸ್ಥಳ ಬಿಟ್ಟು ಹೋಗಿದ್ದರೆ ಅಷ್ಟೊಂದು ದೊಡ್ಡ ಪ್ರಮಾಣದ ಗಲಾಟೆಯೇ ನಡೆಯುತ್ತಿರಲಿಲ್ಲ. ಆದರೆ, ಗುಂಪು ಗುಂಪಾಗಿ ಬಂದ ಯುವಕರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದೇ ಗಲಾಟೆಗೆ ಮುಖ್ಯ ಕಾರಣವಾಯಿತು.
ಇಷ್ಟೆಲ್ಲ ಬೆಳವಣಿಗೆ ನಡೆದಿದ್ದು, ವಿದ್ಯಾಕಾಶಿ ಧಾರವಾಡದಲ್ಲಿ. ಹೌದು! ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಈ ಯೋಜನೆ ವಿರೋಧಿಸಿ ಧಾರವಾಡದಲ್ಲೂ ಎರಡು ಯುವಕರ ಗುಂಪು ಪ್ರತಿಭಟನೆಗಿಳಿದಿದ್ದವು. ಧಾರವಾಡದ ಹಳೇ ಡಿವೈಎಸ್ಪಿ ವೃತ್ತದಲ್ಲಿ ಸುಮಾರು 200 ಜನ ಯುವಕರ ಗುಂಪು ಪ್ರತಿಭಟನೆ ನಡೆಸುತ್ತಿತ್ತು. ಈ ಯುವಕರ ಗುಂಪನ್ನು ತಡೆದ ಪೊಲೀಸರು, ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿಯನ್ನೇ ಸ್ಥಳಕ್ಕೆ ಕರೆಯಿಸಿ ಮನವಿ ಪತ್ರ ಕೊಡುವಂತೆ ಮಾಡಿದರು. ಮನವಿ ಪತ್ರ ಕೊಟ್ಟ ನಂತರ ಸ್ಥಳದಿಂದ ಹೊರಡುವಂತೆ ಪೊಲೀಸರು ಯುವಕರಿಗೆ ಮನವಿ ಮಾಡಿದರು. ಅಷ್ಟೊತ್ತಿಗೆ ಮತ್ತೊಂದು ಯುವಕರ ಗುಂಪು ಸ್ಥಳಕ್ಕೆ ಬಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಈ ರೀತಿಯ ವಾಗ್ವಾದ ನಡೆದಿದ್ದರಿಂದ ಪೊಲೀಸರು ಅನಿವಾರ್ಯವಾಗಿ ತಮ್ಮ ಲಾಠಿಗೆ ಕೆಲಸ ಕೊಡಬೇಕಾಯಿತು.
ಅಲ್ಲಿ ಜಮಾಯಿಸಿದ್ದ ಯುವಕರ ಗುಂಪನ್ನು ಕೇವಲ ಹತ್ತೇ ನಿಮಿಷದಲ್ಲಿ ಪೊಲೀಸರು ಲಾಠಿ ಬೀಸಿ ಚದುರಿಸುವ ಕೆಲಸ ಮಾಡಿದರು. ಯಾವಾಗ ಪೊಲೀಸರು ತಮ್ಮ ಲಾಠಿಗೆ ಕೆಲಸ ಕೊಟ್ಟರೋ ಆಗ ಯುವಕರು ತಮ್ಮ ಕಾಲಿಗೆ ಬುದ್ಧಿ ಹೇಳಿ ಅಲ್ಲಿಂದ ದಿಕ್ಕಾಪಾಲಾಗಿ ಓಡಿ ಹೋದರು. ಆದರೂ ಬಿಡದ ಪೊಲೀಸರು ಹಲವಾರು ಯುವಕರಿಗೆ ಬೆತ್ತದ ರುಚಿ ತೋರಿಸಿ ವಶಕ್ಕೆ ಪಡೆದರು. ಕೆಲವೊಂದಿಷ್ಟು ಜನ ಕಂಪೌಂಡ್ ಹಾರಿ ಓಡಿ ಹೋಗಲು ಯತ್ನಿಸಿದರು. ಇದೇ ವೇಳೆ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ಕೂಡ ನಡೆಯಿತು. ಈ ಘಟನೆ ಸಂಬಂಧ ಮಾಹಿತಿ ಪಡೆದುಕೊಳ್ಳಲು ಸ್ವತಃ ಪೊಲೀಸ್ ಆಯುಕ್ತ ಲಾಬುರಾಮ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಗಲಾಟೆ ನಡೆದ ಬಳಿಕವೂ ಮತ್ತಷ್ಟು ಜನ ಯುವಕರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ಪೊಲೀಸರು ಅದರಲ್ಲೂ ಕೆಲವೊಂದಿಷ್ಟು ಜನರನ್ನು ವಶಕ್ಕೆ ಪಡೆದರು.
ಒಟ್ಟಾರೆಯಾಗಿ ಅಗ್ನಿಪಥ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಧಾರವಾಡದಲ್ಲಿ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದಂತೂ ಸುಳ್ಳಲ್ಲ.
Kshetra Samachara
18/06/2022 06:23 pm